ಗೋವಾ ಗಣಿ ತೆರಿಗೆ ಲೋಪದಿಂದ 108 ಕೋಟಿ ರೂ. ನಷ್ಟ: ಸಿಎಜಿ

ಪಣಜಿ, ಆ.4: ಗೋವಾದ ಹದಿಮೂರು ಗಣಿಗಾರಿಕಾ ಲೀಸ್‌ಗಳ ಮೇಲಿನ ತೆರಿಗೆಯನ್ನು ರಾಜ್ಯ ಸರಕಾರ ತಪ್ಪಾಗಿ ಲೆಕ್ಕಹಾಕಿದ ಪರಿಣಾಮ ರಾಜ್ಯಕ್ಕೆ 108 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಸಿಎಜಿ ತಿಳಿಸಿದೆ.
ಜನವರಿ 5,2015ರಿಂದ ಫೆಬ್ರವರಿ 16,2016ರವರೆಗಿನ ಈ ಹದಿಮೂರು ಗಣಿಗಾರಿಕಾ ಲೀಸ್‌ಗಳ ನಿಜವಾದ ತೆರಿಗೆಯು 169.72 ಕೋಟಿ ರೂ. ಆಗಿದೆ. ಆದರೆ ರಾಜ್ಯದ ಗಣಿಗಾರಿಕೆ ಮತ್ತು ಭೂಗರ್ಭಶಾಸ್ತ್ರ ನಿರ್ದೇಶನಾಲಯ ತಪ್ಪು ಲೆಕ್ಕಹಾಕಿ ಅದನ್ನು ಕೇವಲ 66.45 ಕೋಟಿ ರೂ. ಎಂದು ತಿಳಿಸಿದೆ. ಇದರಿಂದ ರಾಜ್ಯಕ್ಕೆ 108 ಕೋಟಿ ರೂ. ನಷ್ಟವಾಗಿದೆ ಎಂದು ಸಿಎಜಿ ತನ್ನ 2016-17ರ ವರದಿಯಲ್ಲಿ ತಿಳಿಸಿದೆ. ನಿರ್ದೇಶನಾಲಯ, ಲೀಸ್ ಪಡೆದವರು ಮತ್ತು ಸಿವಿಲ್ ರಿಜಿಸ್ಟ್ರಾರ್ ಹಾಗೂ ಸಬ್ ರಿಜಿಸ್ಟ್ರಾರ್ ಅವರು ನೋಂದಯಿಸಿರುವ 76 ಗಣಿಗಾರಿಕಾ ಲೀಸ್‌ಗಳ ಒಡಂಬಡಿಕೆಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಈ ಲೋಪ ಬಯಲಾಗಿದೆ ಎಂದು ಸಿಎಜಿ ತಿಳಿಸಿದೆ.
ಅಕ್ರಮ ಗಣಿಗಾರಿಕೆಯ ಪರಿಣಾಮವಾಗಿ 2012ರಲ್ಲಿ ಸರ್ವೋಚ್ಚ ನ್ಯಾಯಾಲಯ ಗೋವಾದಲ್ಲಿ ಗಣಿಗಾರಿಕೆ ಮೇಲೆ ನಿಷೇಧ ಹೇರಿತ್ತು. ಈ ನಿಷೇಧವನ್ನು 2014ರಲ್ಲಿ ತೆರವುಗೊಳಿಸಿದ ನಂತರ 2014ರಲ್ಲಿ ಮತ್ತೆ ಗಣಿಗಳನ್ನು ಲೀಸ್‌ಗೆ ನೀಡಲಾಗಿತ್ತು.





