ಕುಮಾರಸ್ವಾಮಿಯ ರೈತರ ಸಾಲಮನ್ನಾ ಹೇಳಿಕೆ ಕೇವಲ ಬೂಟಾಟಿಕೆ: ಶಾಸಕ ಅಪ್ಪಚ್ಚು ರಂಜನ್

ಸೋಮವಾರಪೇಟೆ,ಆ.05: ವಚನಭ್ರಷ್ಟ ಖ್ಯಾತಿಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ರೈತರ ಸಾಲಮನ್ನಾ ಹೇಳಿಕೆ ಕೇವಲ ಬೂಟಾಟಿಕೆ ಎಂದು ಶಾಸಕ ಅಪ್ಪಚ್ಚು ರಂಜನ್ ವ್ಯಂಗ್ಯವಾಡಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 48 ಸಾವಿರ ಕೋಟಿ ರೂ.ಗಳಷ್ಟು ರೈತರ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ. ಅಷ್ಟು ಹಣ ಯಾವ ಯಾವ ಮೂಲಗಳಿಂದ ಸಂಗ್ರಹ ಮಾಡಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ರೈತರ 2 ಲಕ್ಷ ರೂ.ಗಳ ಸುಸ್ತಿ ಸಾಲ ಮನ್ನಾ ಮಾಡುಲಾಗುವುದು ಎನ್ನುತ್ತಾರೆ. ಆದರೆ ಸಾಲಮನ್ನಾಕ್ಕೆ 14 ಷರತ್ತುಗಳನ್ನು ಒಡ್ಡಿದ್ದಾರೆ. ಈ ಷರತ್ತುಗಳ ಪ್ರಕಾರ ಯಾವ ರೈತನ ಸಾಲವೂ ಮನ್ನಾ ಆಗುವುದಿಲ್ಲ. ಸಾಲಮನ್ನಾ ಡೈಲಾಗ್ ಕೇವಲ ರೈತರ ಕಣ್ಣೊರೆಸುವ ತಂತ್ರ ಎಂದು ವ್ಯಂಗ್ಯವಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 50 ಸಾವಿರ ರೂ. ರೈತರ ಸಾಲಮನ್ನಾ ಮಾಡಿದೆ. ಸರ್ಕಾರದ ಆದೇಶದಂತೆ 149 ಕೋಟಿ ರೂ. ಹಣವನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಾಲಗಾರರಿಗೆ ವಿತರಿಸಿದೆ. ಜಿಲ್ಲೆಯ ಅನೇಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಪಾವತಿಸಿದ್ದಾರೆ. ಆದರೆ ಸರ್ಕಾರದಿಂದ ಕೇವಲ 3.50ಕೋಟಿ ರೂ. ಬಂದಿದೆ. ಮುಖ್ಯಮಂತ್ರಿಗಳು ಮೊದಲು ಈ ಹಣವನ್ನು ಬಿಡುಗಡೆಗೊಳಿಸಬೇಕು. ನಂತರ ಸಮ್ಮಿಶ್ರ ಸರ್ಕಾರದ ಸಾಲಮನ್ನಾದ ಬಗ್ಗೆ ಮಾತನಾಡಲಿ ಎಂದು ಸಲಹೆ ನೀಡಿದರು. ಇತ್ತೀಚೆಗೆ ಸಿ.ಎಂ. ಕುಮಾರಸ್ವಾಮಿಯವರು ಮೊನ್ನೆ ತಲಕಾವೇರಿಗೆ ಬಂದು ಅತಿವೃಷ್ಟಿ ನಿರ್ವಹಣೆಗೆ 100 ಕೋಟಿ ರೂ. ಅನುದಾನ ಘೋಷಿಸಿ ಹೋಗಿದ್ದಾರೆ. ಆದರೆ ನಯಾಪೈಸೆ ಜಿಲ್ಲಾಧಿಕಾರಿಗಳ ಖಾತೆಗೆ ಬಂದಿಲ್ಲ ಎಂದರು.
ಸೋಮವಾರಪೇಟೆ, ಕುಶಾಲನಗರ, ವಿರಾಜಪೇಟೆ ಪಟ್ಟಣ ಪಂಚಾಯತ್ ಆಡಳಿತನ್ನು ಬಿಜೆಪಿ ಹಿಡಿಯಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಿಂದ ನೇರ ಸ್ಪರ್ಧೆಯಿದ್ದರೂ ಗೆಲುವಿಗೆ ಸಮಸ್ಯೆಯಿಲ್ಲ ಎಂದು ಹೇಳಿದರು.
ಅತೀವೃಷ್ಠಿಯಿಂದ ತಾಲೂಕಿನಲ್ಲಿ ಶೇ.50ರಷ್ಟು ಬೆಳೆಹಾನಿ ಸಂಭವಿಸಿದ್ದು, ಕೂಡಲೆ ಪರಿಹಾರ ನೀಡಬೇಕೆಂದು ಮಾಜಿ ವಿಧಾನಪರಿಷತ್ ಸದಸ್ಯ ಎಸ್.ಜಿ.ಮೇದಪ್ಪ ಹೇಳಿದರು. ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್, ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಜಿಪಂ ಸದಸ್ಯ ಶ್ರೀನಿವಾಸ್ ಇದ್ದರು.







