ಕೊಡಗು ಹವ್ಯಕ ವಲಯೋತ್ಸವ: ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ

ಮಡಿಕೇರಿ,ಆ.05: ವಲಯೋತ್ಸವದಂತಹ ಕಾರ್ಯಕ್ರಮಗಳಿಂದ ಹವ್ಯಕ ಸಂಘಟನೆಯು ಭದ್ರವಾಗಲಿದೆ ಹಾಗೂ ಸಮಾಜದ ಸದಸ್ಯರನ್ನು ಒಂದೆಡೆ ಸಮೀಕರಿಸಲು ಸಾಧ್ಯವಾಗಿದೆ ಎಂದು ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ. ಕೃಷ್ಣಭಟ್ ಹೇಳಿದರು.
ಮಡಿಕೇರಿಯ ಲಕ್ಷ್ಮೀನರಸಿಂಹ ಕಲ್ಯಾಣಮಂಟಪದಲ್ಲಿ ಭಾನುವಾರ ನಡೆದ ಕೊಡಗು ಹವ್ಯಕ ವಲಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮುಳ್ಳೇರಿಯ ಮಂಡಲದಲ್ಲಿ ಮೂರು ಸಾವಿರ ಹವ್ಯಕ ಮನೆಗಳಿದ್ದು, 12 ವಲಯಗಳನ್ನು ಒಳಗೊಂಡಿದೆ. ಕೊಡಗು ಜಿಲ್ಲೆಯಿಂದ ಕಾಸರಗೋಡುವರೆಗೆ ಹವ್ಯಕ ಜನಾಂಗ ವಾಸಿಸುವ ಭೌಗೋಳಿಕ ವ್ಯಾಪ್ತಿ ದೊಡ್ಡದು. ಹವ್ಯಕ ಸಮಾಜದ ಗುರುಗಳ ಆಶೀರ್ವಾದದೊಂದಿಗೆ ಸಮಾಜ ಬಾಂಧವರು ಸಂಘಟನೆಯನ ದೃಷ್ಟಿಯಿಂದ ವಿವಿಧ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಹವ್ಯಕ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮೂಲೆ, ಕೊಡಗು ಹವ್ಯಕ ವಲಯದ ಶಿಷ್ಯರಿಗೆ ವಿವಿಧ ಸೂಚನೆಗಳನ್ನು ನೀಡಿದರು. ಹವ್ಯಕ ವಲಯಾಧ್ಯಕ್ಷ ಕೆ.ಆರ್.ನಾರಾಯಣಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಲಯ ನಿರ್ದೇಶಕ ಮಿತ್ತೂರು ಈಶ್ವರಭಟ್, ಮಂಡಲ ಅಶೋಕೆ ಪ್ರತಿನಿಧಿ ಎಂ.ಎನ್.ಹರೀಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಘಟಕಗಳ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು. ವಿಶೇಷ ಸಾಧನೆ ಮಾಡಿದ ಪಾಲಂಗಾಲದ ಡಾ.ಸುಲೋಚನ ನಾರಾಯಣ ಅವರನ್ನು ಸನ್ಮಾನಿಸಲಾಯಿತು. ಸಮಾಜಬಾಂಧವರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಶ್ರೀಶಂಕರಾಚಾರ್ಯರ ಛದ್ಮವೇಷ, ಹವ್ಯಕ ಪಾಕ ತಯಾರಿ, ಹವ್ಯಕ ವಸ್ತ್ರಧಾರಣೆ, ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಶೇ. 90 ಅಂಕಗಳಿಗಿಂತ ಅಧಿಕ ಅಂಕ ಗಳಿಸಿದ ಎಸೆಸೆಲ್ಸಿ ಹಾಗೂ ಪಿಯುಸಿ ಹವ್ಯಕ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾಪುರಸ್ಕಾರ ನೀಡಲಾಯಿತು. ಹೊಸೂರು ಶ್ರೀನಿವಾಸ ಮೂರ್ತಿ ವಲಯೋತ್ಸವ ಗೀತೆ ಹಾಡಿದರು. ವಲಯ ಕಾರ್ಯದರ್ಶಿ ಡಾ.ಎ.ಆರ್.ರಾಜಾರಾಂ ವಾರ್ಷಿಕ ವರದಿ ವಾಚಿಸಿದರು. ಈಶ್ವರ ಭಟ್ ವಂದಿಸಿದರು. ಕೃಷ್ಣವೇಣಿ ವೇಣುಗೋಪಾಲ್ ಮತ್ತು ಸಿ.ಎಸ್.ಸುರೇಶ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.







