ಅನಧಿಕೃತ ಜಾಹೀರಾತು ಫಲಕಗಳ ಕಡಿವಾಣಕ್ಕೆ ಸಿದ್ಧತೆ: ಬಿಬಿಎಂಪಿಯಿಂದ ಹೊಸ ಬೈಲಾಕ್ಕೆ ಚಿಂತನೆ

ಬೆಂಗಳೂರು, ಆ.5: ನಗರದಲ್ಲಿ ಅನಧಿಕೃತವಾಗಿರುವ ಜಾಹೀರಾತು ಫಲಕಗಳಿಗೆ ಕಡಿವಾಣ ಹಾಕಲು ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಹೊಸ ಜಾಹೀರಾತು ಉಪವಿಧಿಗಳನ್ನು(ಬೈಲಾ) ರೂಪಿಸಲು ಮುಂದಾಗಿದೆ.
ಜಾಹೀರಾತು ಫಲಕಗಳ ಅಳವಡಿಕೆ ಹಾಗೂ ನವೀಕರಣದ ಅನುಮತಿಯನ್ನು ಕೆಎಂಸಿ ಕಾಯ್ದೆ ವ್ಯಾಪ್ತಿಗೆ ಬರುವ ಜಾಹೀರಾತುಗಳನ್ನು ಬೈಲಾ 2006 ರ ಪ್ರಕಾರ ನೀಡಲಾಗುತ್ತಿತ್ತು. ಕಳೆದ ಹನ್ನೆರಡು ವರ್ಷಗಳಲ್ಲಿ ಜಾಹೀರಾತು ಪ್ರದರ್ಶನ ಮಾದರಿಯಲ್ಲಿ ಪರಿಣಾಮಕಾರಿ ಬದಲಾವಣೆಗಳಾಗಿವೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಹೊಸ ಬೈಲಾ ಜಾರಿಗೆ ನಿರ್ಧರಿಸಿದೆ.
ದೊಡ್ಡ ಹೋರ್ಡಿಂಗ್ಸ್, ತಾತ್ಕಾಲಿಕ ಜಾಹೀರಾತು, ವಾಣಿಜ್ಯ ಮಳಿಗೆಗಳಲ್ಲಿ ಪ್ರದರ್ಶನ ಜಾಹೀರಾತು, ಕೇಬಲ್ ಜಾಹೀರಾತು ಸೇರಿದಂತೆ 19 ರೀತಿಯ ಜಾಹೀರಾತುಗಳನ್ನು ಹೊಸ ಬೈಲಾ ಅಡಿಯಲ್ಲಿ ತರಲು ಉದ್ದೇಶಿಸಲಾಗಿದೆ. ಹೊಸ ಬೈಲಾ ಅನ್ವಯ ಜಾಹೀರಾತು ಪ್ರಕಟಿಸುವ ಮುನ್ನ ಪಾಲಿಕೆ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ಹಳೆಯ ಬೈಲಾಗಳ ಪ್ರಕಾರ ಜಾಹೀರಾತು ಅಳವಡಿಕೆಗೆ ಎ, ಬಿ, ಸಿ, ಡಿ ಎಂಬ ನಾಲ್ಕು ವಲಯಗಳನ್ನು ಮಾಡಲಾಗಿತ್ತು. ಅದರಂತೆ ಎ ವಲಯ ವ್ಯಾಪ್ತಿಯ ಕುಮಾರಕೃಪಾ ರಸ್ತೆ, ರಾಜಭವನ ರಸ್ತೆ ಸೇರಿದಂತೆ 10 ರಸ್ತೆಗಳಲ್ಲಿ ಜಾಹೀರಾತು ಪ್ರಕಟವನ್ನು ನಿಷೇಧಿಸಲಾಗಿದೆ. ಬಿ ವಲಯದಲ್ಲಿ 24, ಸಿ ವಲಯದಲ್ಲಿ 97 ರಸ್ತೆಗಳಲ್ಲಿ ಜಾಹೀರಾತು ಅಳವಡಿಕೆಗೆ ಅನುಮತಿ ನೀಡಲಾಗಿದೆ.
ಅಳತೆ ಮೀರಿದರೆ ಸೂಕ್ತ ಕ್ರಮ: ಪಾಲಿಕೆಯ ಬಿ ವಲಯದಲ್ಲಿ ಗರಿಷ್ಠ 30x15, ಸಿ ಮತ್ತು ಡಿ ವಲಯದಲ್ಲಿ ಗರಿಷ್ಠ 40x20 ಅಳತೆಯ ಜಾಹೀರಾತು ಫಲಕಗಳನ್ನು ಅಳವಡಿಸಲು ಅವಕಾಶವಿದೆ. ಆದರೆ, ಏಜೆನ್ಸಿಗಳು ನಿಯಮ ಮೀರಿ ಹೆಚ್ಚಿನ ಅಳತೆಯ ಜಾಹೀರಾತು ಫಲಕಗಳನ್ನು ಅಳವಡಿಸುತ್ತಿರುವುದರಿಂದ ಪಾಲಿಕೆಗೆ ನಷ್ಟವಾಗುತ್ತಿದೆ. ಹೀಗಾಗಿ, ಜಾಹೀರಾತು ಅಳತೆ ಹೆಚ್ಚಿಸಲು ಚರ್ಚಿಸಲಾಗಿದೆ. ನಿಯಮ ಉಲ್ಲಂಘನೆ ಹೆಚ್ಚಿನ ದಂಡ, ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
‘ಸೋಮವಾರ ಪಾಲಿಕೆ ಸಭೆಯಲ್ಲಿ ಹೊಸ ಜಾಹೀರಾತು ನೀತಿ ಜಾರಿಗೆ ಸಂಬಂಧಿಸಿದಂತೆ ಸಾಧಕ-ಬಾಧಕಗಳ ಚರ್ಚೆ ನಡೆಸಿ, ಬೈಲಾ ಮಂಡಿಸಿ ಸದಸ್ಯರ ಸಲಹೆಗಳನ್ನು ಪಡೆದು ಸರಕಾರಕ್ಕೆ ಸಲ್ಲಿಸಲಾಗುತ್ತದೆ’
-ಎಂ.ಶಿವರಾಜು, ಬಿಬಿಎಂಪಿ ಆಡಳಿತ ಪಕ್ಷದ ನಾಯಕ







