ರವಿವಾರ ಕೂಡ ಮಧ್ಯಸ್ಥಿಕೆ ಕೇಂದ್ರ ಆರಂಭ ವಿಚಾರದಲ್ಲಿ ತನಗೆ ಯಾವುದೆ ಮಾಹಿತಿ ಇಲ್ಲ: ಎ.ಪಿ.ರಂಗನಾಥ್
ಬೆಂಗಳೂರು, ಆ.5: ಬೆಂಗಳೂರಿನ ಮಧ್ಯಸ್ಥಿಕೆ ಕೇಂದ್ರ ಸೆಪ್ಟಂಬರ್ 2ರಿಂದ ರವಿವಾರವೂ ಕಾರ್ಯನಿರ್ವಹಿಸಲು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಪ್ರಕಟಿಸಿದ್ದು ಎಂಬ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ, ಈ ಬಗ್ಗೆ ಸಂಘದೊಂದಿಗೆ ಚರ್ಚಿಸಿಲ್ಲ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ತಿಳಿಸಿದ್ದಾರೆ.
ನ್ಯಾಯದಾನ ವ್ಯವಸ್ಥೆಯಲ್ಲಿ ವಕೀಲರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಇಂತಹ ಮಹತ್ವದ ತೀರ್ಮಾನ ಕೈಗೊಳ್ಳುವಾಗ ಮುಖ್ಯ ನ್ಯಾಯಮೂರ್ತಿಗಳು ವಕೀಲರೊಂದಿಗೆ ಸಮಾಲೋಚಿಸಬೇಕಿತ್ತು. ವಕೀಲರು ಈಗಾಗಲೇ ಕೆಲಸದ ಒತ್ತಡದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು.
ಈ ರೀತಿಯಾಗಿ ರವಿವಾರವೂ ಮಧ್ಯಸ್ಥಿಕೆ ಕೇಂದ್ರ ಕಾರ್ಯನಿರ್ವಹಿಸಿದರೆ ಅವರ ಕೆಲಸದ ಒತ್ತಡ ಇನ್ನಷ್ಟು ಹೆಚ್ಚಾಗಲಿದೆ. ಹೀಗಾಗಿ, ಈ ಪ್ರಸ್ತಾಪಕ್ಕೆ ನಾವು ಸಹಮತ ವ್ಯಕ್ತಪಡಿಸುವುದಿಲ್ಲ. ಈ ಪ್ರಸ್ತಾಪವನ್ನು ನಾವು ವಿರೋಧಿಸುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ತಕ್ಷಣ ವಕೀಲರ ಸಭೆ ಕರೆದು ಚರ್ಚಿಸಬೇಕು. ಬಳಿಕ ಈ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.





