ಎಲ್‌ಕೆಜಿ-ಯುಕೆಜಿಯಿಂದ ನೂರು ಕೆ.ಜಿ.ವರೆಗೂ ಕನ್ನಡ ಇರಲಿ: ಸಾಹಿತಿ ರಾಮಲಿಂಗೇಶ್ವರ
ಮೇಘಮೈತ್ರಿ ಕನ್ನಡ ಸಾಹಿತ್ಯ ಸಮ್ಮೇಳನ
ಬೆಂಗಳೂರು, ಆ.5: ಎಲ್‌ಕೆಜಿ-ಯುಕೆಜಿಯಿಂದ ಹಿಡಿದು ನೂರು ಕೆಜಿಯ ವರೆಗೂ ಪ್ರತಿ ಶಾಲಾ-ಕಾಲೇಜುಗಳಲ್ಲಿ ಕನ್ನಡ ಒಂದು ಭಾಷೆಯನ್ನಾಗಿ ಕಲಿಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಸಾಹಿತಿ ಎಸ್.ರಾಮಲಿಂಗೇಶ್ವರ ಇಂದಿಲ್ಲಿ ಸಲಹೆ ಮಾಡಿದ್ದಾರೆ.
ರವಿವಾರ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಮೇಘ ಮೈತ್ರಿ ಪ್ರಥಮ ಕನ್ನಡ ಮತ್ತು ಸಾಹಿತ್ಯ ವೇದಿಕೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ಕನ್ನಡ ಕಡ್ಡಾಯವಾಗಿ ಓದುವಂತೆ ಆಗಬೇಕು. ಈ ನಿಟ್ಟಿನಲ್ಲಿ ನೆರೆ ರಾಜ್ಯಗಳಂತೆ ಭಾಷಾ ಅಭಿಮಾನ ಜನರಲ್ಲಿ ಮೂಡಿಸಲು ಕನ್ನಡಪರ ಹೋರಾಟಗಾರರು ಮುಂದಾಗಬೇಕು. ಜೊತೆಗೆ ಬೇರೆ ಭಾಷೆ ಹೇರುವ ಸಂಸ್ಕೃತಿ ವಿರುದ್ಧ ಹೋರಾಟ ರೂಪಿಸಬೇಕು ಎಂದು ನುಡಿದರು.
ಸಂಘಟನೆಗಳು ಪ್ರತಿ ಬೀದಿಗಳಲ್ಲಿವೆ. ಒಂದೊಂದು ಸಂಘಟನೆ ವಿಭಿನ್ನ ರೀತಿಯ ಆಲೋಚನೆ ಇಟ್ಟುಕೊಂಡಿವೆ. ಆದರೆ, ಸಂಘರ್ಷದ ಹಾದಿಯಲ್ಲಿ ನಡೆಯದೆ, ಕನ್ನಡ ಬಲ್ಲದವರಿಗೆ ಕಲಿಸಲು-ತಿಳಿ ಹೇಳಬೇಕು. ಆಗ ಭಾಷಾ ಬೆಳವಣಿಗೆ ಕಾಣಲು ಸಾಧ್ಯ ಎಂದು ಅವರು ತಿಳಿಸಿದರು.
ಶಿಕ್ಷಣ ಇಂದು ಮಾರಾಟ, ವ್ಯಾಪಾರದ ವಸ್ತುಗಳಾಗುತ್ತಿವೆ. ಸೇವೆ ಎಂಬ ಭಾವನೆ ಮರೆಯಾಗುತ್ತದೆ. ಇನ್ನೂ ಕೆಲವೊಂದು ಸಂಸ್ಥೆಗಳು ಅಪವಾದ ಎಂದೇ ಹೇಳಬೇಕು ಎಂದ ಅವರು, ಸರಕಾರವು ಅಕ್ಕಿ ಉಚಿತವಾಗಿ ನೀಡುವ ಬದಲು ಉಚಿತ ಆರೋಗ್ಯ ಚಿಕಿತ್ಸೆ, ಗುಣಮಟ್ಟ ಶಿಕ್ಷಣ ಹಾಗೂ ಉದ್ಯೋಗ ಕಲ್ಪಿಸಬೇಕು ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಸಂಘ-ಸಂಸ್ಥೆಗಳು ಪ್ರತಿಭಟಿಸುವ ಸಂಸ್ಕೃತಿಯಿಂದ ಹೊರಬಂದು, ಕನ್ನಡ ಕಲಿಕೆ ಮಾಡುವ ಕಾರ್ಯತಂತ್ರಗಳನ್ನು ರೂಪಿಸಬೇಕು. ಇದರಿಂದ ಕನ್ನಡದ ವ್ಯಾಪ್ತಿ ಹೆಚ್ಚಲಿದೆ ಎಂದು ಸಲಹೆ ನೀಡಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಪ್ರತ್ಯೇಕತೆಯ ಕೂಗು ಹುಟ್ಟು ಹಾಕಲಾಗಿದೆ. ಅದು ಅಲ್ಲದೆ, ಕರ್ನಾಟಕ ಏಕೀಕರಣದ ಮಹತ್ವ ತಿಳಿಯದೆ, ಕೆಲವರು ಲಘುವಾಗಿ ಮಾತನಾಡ ತೊಡಗಿದ್ದಾರೆ. ಇದು ನಮ್ಮ ಏಕತೆಗೆ ಧಕ್ಕೆ ತರಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮ್ಮೇಳನದ ಧ್ವಜಾರೋಹಣವನ್ನು ಬೆಂಗಳೂರು ವಕೀಲರ ಸಾಹಿತ್ಯ ಕೂಟದ ಅಧ್ಯಕ್ಷ ನಂಜಪ್ಪ ನೆರವೇರಿಸಿದರು. ಸಾಹಿತಿಗಳಾದ ಡಾ.ಬೈರಮಂಗಲ ರಾಮೇಗೌಡ, ಗಣೇಶ್ ಕೊಡುರು, ಕೇಂದ್ರ ಕಸಾಪ ಕಾರ್ಯಕಾರಿ ಸದಸ್ಯ ಡಾ.ಶೇಖರ ಮಾಲಿ ಪಾಟೀಲ ಸೇರಿ ಮತ್ತಿತರರು ಭಾಗವಹಿಸಿದ್ದರು.







