ಹಾಸ್ಟೆಲ್‌ಗಳಿಗೆ ಸೊಳ್ಳೆ ಪರದೆ ವಿತರಿಸಿ: ಜಿಲ್ಲಾಧಿಕಾರಿ
ಉಡುಪಿ, ಆ. 5: ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ನಗರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದು, ನಗರ ಪ್ರದೇಶದಲ್ಲಿರುವ ಎಲ್ಲಾ ಹಾಸ್ಟೆಲ್‌ಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಹಾಸ್ಟೆಲ್‌ಗಳ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸೊಳ್ಳೆ ಪರದೆಯನ್ನು ವಿತರಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಆಹಾರ ಸುರಕ್ಷತಾ ಸಲಹಾ ಸಮಿತಿ ಅಂತರ್ ಇಲಾಖಾ ಮಲೇರಿಯಾ ಮತ್ತು ಡೆಂಗ್ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು.
ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಮಲೇರಿಯಾ ಪ್ರಕರಣಗಳು ಕಡಿಮೆ ವರದಿಯಾಗಿವೆ. 2016ರಲ್ಲಿ 1168 ಪ್ರಕರಣಗಳಿದ್ದು, 2017ರಲ್ಲಿ 513 ಪ್ರಕರಣಗಳು ಹಾಗೂ ಈ ವರ್ಷ ಇದುವರೆಗೆ 79 ಪ್ರಕರಣಗಳಷ್ಟೇ ವರದಿಯಾಗಿವೆ. ನಗರ ಪ್ರದೇಶದಲ್ಲಿ ಪ್ರಕರಣಗಳು ಹೆಚ್ಚಾಗಿದ್ದು, ವಲಸೆ ಕಾರ್ಮಿಕರಲ್ಲಿ ಹೆಚ್ಚು ಪ್ರಕರಣ ಕಂಡು ಬರುತ್ತಿವೆ. ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ ಉಡುಪಿಯಲ್ಲಿ 35563, ಕುಂದಾಪುರದಲ್ಲಿ 4450, ಕಾರ್ಕಳದಲ್ಲಿ 200 ಸೇರಿದಂತೆ ಒಟ್ಟು 40213 ಸೊಳ್ಳೆ ಪರದೆ ವಿತರಿಸಲಾಗಿದೆ ಎಂದು ಜಿಲ್ಲಾ ಮಲೇರಿಯ ಅಧಿಕಾರಿ ಡಾ. ಪ್ರೇಮಾನಂದ ಮಾಹಿತಿ ನೀಡಿದರು.
ನಗರ ಪ್ರದೇಶದಲ್ಲಿ ಹಾಸ್ಟೆಲ್‌ಗಳಿಗೆ ಸೊಳ್ಳೆ ಪರದೆ ವಿತರಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಹಾಸ್ಟೆಲ್‌ಗಳ ಕಿಟಕಿಗಳಿಗೆ ಮೆಷ್ ಅಳವಡಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ನಗರ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸಿಬ್ಬಂದಿ ನೇಮಕ ಮಾಡಲು ಕ್ರಮ ಕೈಗೊಳ್ಳುವಂತೆ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ಮೂಲಕ ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸುವಂತೆ ಸಹ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಕಳೆದ ವರ್ಷ 383 ಡೆಂಗ್ ಪ್ರಕರಣ ವರದಿಯಾಗಿದ್ದು, ಈ ವರ್ಷ ಇದುವರೆಗೆ 91 ಪ್ರಕರಣ ವರದಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಡೆಂಗ್ ಮತ್ತು ಮಲೇರಿಯಾ ನಿಯಂತ್ರಣ ಕುರಿತಂತೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಕುರಿತು ಅರಿವು ಮೂಡಿಸಿ, ಬಾವಿಗಳಲ್ಲಿ ಗಪ್ಪಿ ಮತ್ತು ಗಂಬೂಶಿಯಾ ಮೀನು ಸಾಕಾಣಿಕೆಗೆ ಮಾಹಿತಿ ನೀಡಿ. ಅಗತ್ಯವಿರುವ ಮೀನು ಗಳನ್ನು ಉತ್ಪಾದಿಸಿ ಸಾರ್ವಜನಿಕರಿಗೆ ವಿರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಡೆಂಗ್ ಮತ್ತು ಮಲೇರಿಯಾ ನಿಯಂತ್ರಣ ಕುರಿತಂತೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಕುರಿತು ಅರಿವು ಮೂಡಿಸಿ, ಬಾವಿಗಳಲ್ಲಿ ಗಪ್ಪಿ ಮತ್ತು ಗಂಬೂಶಿಯಾ ಮೀನು ಸಾಕಾಣಿಕೆಗೆ ಮಾಹಿತಿ ನೀಡಿ. ಅಗತ್ಯವಿರುವ ಮೀನು ಗಳನ್ನು ಉತ್ಪಾದಿಸಿ ಸಾರ್ವಜನಿಕರಿಗೆ ವಿತರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, ಆರೋಗ್ಯ ಇಲಾಖೆ ಮತ್ತು ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







