ಮಮತಾರ ‘ರಕ್ತಪಾತ’ ಹೇಳಿಕೆ ಹಿಂದೆ ಓಟ್‌ಬ್ಯಾಂಕ್ ಉದ್ದೇಶ : ಅಸ್ಸಾಂ ಸಿಎಂ ಟೀಕೆ

ಹೊಸದಿಲ್ಲಿ, ಆ.5: ಎನ್‌ಆರ್‌ಸಿ ಕುರಿತ ಮಮತಾರ ಹೇಳಿಕೆ ಹಿರಿಯ ರಾಜಕಾರಣಿಗಳಿಗೆ ಯೋಗ್ಯವಾದುದಲ್ಲ ಎಂದಿರುವ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್, ಸುಪ್ರೀಂಕೋರ್ಟ್‌ನ ನಿರ್ದೇಶದಂತೆ ಎನ್‌ಆರ್‌ಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತಮ್ಮ ಸರಕಾರ ಬದ್ಧವಾಗಿದೆ ಎಂದಿದ್ದಾರೆ.
ಅಸ್ಸಾಂನ ಪೌರರ ಪಟ್ಟಿಯಾಗಿರುವ ಎನ್‌ಆರ್‌ಸಿ ಬಗ್ಗೆ ಸುಳ್ಳು ಮಾಹಿತಿಯ ಅಪಪ್ರಚಾರ ನಡೆಸಿರುವ ಮಮತಾ ಅವರ ಟಿಎಂಸಿ ಪಕ್ಷವು ಸಂಸತ್ತಿನ ಅಮೂಲ್ಯ ಅವಧಿಯನ್ನು ಹಾಳುಗೆಡವಿದೆ. ಕ್ರಮಬದ್ಧ , ಪಾರದರ್ಶಕವಾಗಿರುವ ಎನ್‌ಆರ್‌ಸಿ ಕರಡು ಪಟ್ಟಿ ಪ್ರಕಟವಾದ ಬಳಿಕ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಒಂದೇ ಒಂದು ಪ್ರಕರಣ ರಾಜ್ಯದಲ್ಲಿ ನಡೆದಿಲ್ಲ ಎಂದು ಸೊನೊವಾಲ್ ಹೇಳಿದ್ದಾರೆ. ಎನ್‌ಆರ್‌ಸಿ ಬಗ್ಗೆ ದೇಶ ಹಾಗೂ ವಿದೇಶದಲ್ಲಿ ವದಂತಿಗಳು ಹಬ್ಬಿದ್ದವು. ಆದರೆ ರಾಜ್ಯದ ಜನತೆ , ಅದರಲ್ಲೂ ವಿಶೇಷವಾಗಿ ಬರಾಕ್ ಕಣಿವೆ ಪ್ರದೇಶದವರು ಮತ್ತು ಬಂಗಾಳಿಗಳಿಗೆ ತಾನು ಅಭಾರಿಯಾಗಿದ್ದೇನೆ. ಕಿಂಚಿತ್ ರಾಜಕೀಯ ಲಾಭಕ್ಕಾಗಿ ಅಸ್ಸಾಂನ ಜನತೆಯನ್ನು ಪ್ರಚೋದಿಸಲು ಪ್ರಯತ್ನಿಸಿದ ಕೆಲವು ಬಾಹ್ಯ ಶಕ್ತಿಗಳ ಕುತಂತ್ರಕ್ಕೆ ರಾಜ್ಯದ ಜನತೆ ಬಲಿಯಾಗಿಲ್ಲ ಎಂದ ಅವರು, ತನ್ನ ರಾಜ್ಯದಲ್ಲಿ ಓಟ್‌ಬ್ಯಾಂಕ್ ಗುರಿಯಾಗಿಸಿಕೊಂಡು ಮಮತಾ ನೀಡಿರುವ ಹೇಳಿಕೆ ಮುಖ್ಯಮಂತ್ರಿಗಳಿಗೆ ತಕ್ಕುದಲ್ಲ ಎಂದರು.
ಅಸ್ಸಾಂ ಮತ್ತು ಪಶ್ಚಿಮಬಂಗಾಳ ರಾಜ್ಯಗಳು ಈ ಹಿಂದಿನಿಂದಲೂ ಸೌಹಾರ್ದ ಸಂಬಂಧ ಹೊಂದಿದ್ದವು. ಈ ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಮಮತಾ ಹೇಳಿಕೆ ನೀಡಬಾರದು ಎಂದು ಸೊನೊವಾಲ್ ಹೇಳಿದರು.





