ಅಖಂಡ ಕರ್ನಾಟಕ ಒಡೆಯಲು ಕೈ ಹಾಕಿರುವವರ ಬಗ್ಗೆ ಜಾಗೃತರಾಗಿರಿ: ಯಡಿಯೂರಪ್ಪ

ಮೈಸೂರು,ಆ.5: ಕೆಲವು ಪಟ್ಟ ಬದ್ಧ ಹಿತಾಸಕ್ತಿಗಳು ಅಖಂಡ ಕರ್ನಾಟಕವನ್ನು ಒಡೆಯಲು ಕೈ ಹಾಕಿದ್ದು, ಅಂತವರ ಬಗ್ಗೆ ಜಾಗೃತೆಯಿಂದ ಇರಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ರವಿವಾರ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ವತಿಯಿಂದ ಬಸವ ಜಯಂತಿ ಆಚರಣೆ ಮತ್ತು ಕರ್ನಾಟಕ ರಾಜ್ಯ ವೀರಶೈವ-ಲಿಂಗಾಯತ ಸಚಿವರು, ಸಂಸದರು, ಶಾಸಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಒಂದೇ. ಮತ ಹಾಕುವುದು ಬಿಡುವುದು ಅವರವರ ಹಕ್ಕು. ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಜಾತಿಯ ಆಧಾರದ ಮೇಲೆ ವೀರಶೈವ-ಲಿಂಗಾಯತ, ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ಎಂದು ಒಡೆದು ಆಳುವವರ ವಿರುದ್ಧ ಎಚ್ಚರಿಕೆಯಿಂದ ಇರಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸದಿದ್ದರೆ ಮುಂದಿನ ಯುವಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.
ಕರ್ನಾಟಕ ಏಕೀಕರಣದಲ್ಲಿ ಸಾಕಷ್ಟು ಮಂದಿಯ ತ್ಯಾಗ ಬಲಿದಾನವಿದೆ. ಆದರೆ ಉತ್ತರ ಕರ್ನಾಟಕದ ಪ್ರತ್ಯೇಕತೆಯ ಮಾತು ಕೇಳಿಬರುತ್ತಿರುವುದು ಆತಂಕವುಂಟು ಮಾಡಿದೆ. ಕೆಲವು ಪಟ್ಟ ಬದ್ಧ ಹಿತಾಸಕ್ತಿಗಳು ಕರ್ನಾಟಕವನ್ನು ಒಡೆಯಲು ಕೈಹಾಕಿವೆ. ಉತ್ತರ ಕರ್ನಾಟಕದಲ್ಲಿ ಜೈನ ಕವಿಗಳ ಕೊಡುಗೆ ದೊಡ್ಡದು. ಅಂದ ಮಾತ್ರಕ್ಕೆ ಆ ಸಾಹಿತ್ಯ ಜೈನರಿಗೆ ಸೀಮಿತ ಎನ್ನಲು ಸಾಧ್ಯವೇ? ಈ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸುವತ್ತ ಹೆಜ್ಜೆ ಹಾಕಬೇಕಿದೆ ಎಂದು ಹೇಳಿದರು.
ವೀರಶೈವ-ಲಿಂಗಾಯತ ಒಂದೇ: ಇತ್ತೀಚಿನ ದಿನಗಳಲ್ಲಿ ಧರ್ಮ ಮತ್ತು ದಾರ್ಶನಿಕರನ್ನು ಜಾತಿ ಮಟ್ಟಕ್ಕೆ ಇಳಿಸುತ್ತಿರುವುದು ದುರ್ಧೈವ. ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ, ಶಾಮನೂರು ಶಿವಶಂಕರಪ್ಪ ಮತ್ತು ತಿಪ್ಪಣ್ಣ ಅವರು ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ವೀರಶೈವ-ಲಿಂಗಾಯತ ಎಂಬ ಪ್ರತ್ಯೇಕತೆ ಉಂಟಾಗುತಿತ್ತು. ಸಮಾಜವನ್ನು ಒಡೆಯಲು ಕೈಹಾಕಿದವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ನಾವು ಬಸವತತ್ವವನ್ನು ಪಾಲಿಸುತ್ತಿರುವವರು. ವೀರಶೈವ-ಲಿಂಗಾಯತ ಒಂದೇ ಎಂದು ಹೇಳಿದರು.
ಬಸವಣ್ಣನವರಲ್ಲಿ ಜಾತಿ ಧರ್ಮ ಸ್ಥಾಪನೆಯ ಹಿಂದೆ ಮಾನವ ಕುಲ ಉದ್ಧಾರವಾಗಬೇಕು ಎಂಬ ಉದ್ದೇಶವಿತ್ತು. ಆದರೆ ಯಾರದ್ದೋ ರಾಜಕೀಯ ದಾಳಕ್ಕೆ ಲಿಂಗಾಯತ-ವೀರಶೈವ ಬಲಿಯಾಗದೇ ಇರುವುದಕ್ಕೆ ಬಸವ ತತ್ವ ಗಟ್ಟಿಯಾಗಿರುವುದೇ ಕಾರಣ. ಆದ್ದರಿಂದ ಯಾರೂ ಕೂಡ ಧರ್ಮ ರಾಜಕೀಯದ ಕುತಂತ್ರಕ್ಕೆ ಬಲಿಯಾಗಬಾರದು ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸಿದ್ದರು. ತುಮಕೂರು ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ, ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಶಾಸಕರಾದ ಅಶೋಕ್ ಖೇಣಿ, ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ್, ಸಿ.ಎಂ.ಉದಾಸಿ, ಅಲ್ಲಂ ವೀರಭದ್ರಪ್ಪ, ವೀರಣ್ಣ ಚರಂತಿಮಠ, ಆಯನೂರು ಮಂಜುನಾಥ್, ಕೆ.ಎಸ್.ಲಿಂಗೇಶ್, ರೇಣುಕಾಚಾರ್ಯ, ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ, ವಿರುಪಾಕ್ಷ, ಬೆಳ್ಳಿ ಪ್ರಕಾಶ್, ಸೇರಿದಂತೆ ಹಲವು ಶಾಸಕರು ಉಪಸ್ಥಿತರಿದ್ದರು.







