ಅಕ್ರಮ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬಾರದು: ಅಧಿಕಾರಿಗಳಿಗೆ ಸಚಿವ ಪುಟ್ಟರಾಜು ಸೂಚನೆ

ಮಂಡ್ಯ, ಆ.5: ಪಾಂಡವಪುರ ತಾಲೂಕಿನ ಚಿನಕುರಳಿ ಹೋಬಳಿಯ ಬೇಬಿಬೆಟ್ಟ, ಹೊನಗಾನಹಳ್ಳಿ ಮತ್ತು ಚಿನಕುರಳಿ ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತನ್ನ ತವರು ಚಿನಕುರಳಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಕುಟುಂಬದ ಯಾರಾದರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದರೆ, ಅವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ತಾಕೀತು ಮಾಡಿದರು.
ಸುಮಾರು 60 ವರ್ಷದಿಂದ ಚಿನಕುರಳಿ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕಲ್ಲು ಹೊಡೆಯುವುದು ಈ ಗ್ರಾಮದ ಹಲವು ಜನರ ಕಸುಬಾಗಿದೆ. ಹಿಂದೆ ಎತ್ತಿನ ಗಾಡಿಯಲ್ಲಿ ಕಲ್ಲನ್ನು ಸಾಗಿಸುತ್ತಿದ್ದರೆ ಈಗ ಲಾರಿ, ಟಿಪ್ಪರ್ ಗಳು ಬಂದಿವೆ. ಜತೆಗೆ ಕಲ್ಲು ಕರಗಿಸಲು ವಿವಿಧ ಯಂತ್ರಗಳು ಬಂದಿವೆ. ಮನಸೋ ಇಚ್ಚೆ ಕಲ್ಲು ಸಾಗಿಸಿ ಲೂಟಿ ಮಾಡಲು ನಾನು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ಈಗಾಗಲೇ ಗಣಿಗಾರಿಕೆ ವಿಚಾರದಲ್ಲಿ ನನ್ನ ಹೆಸರು ಥಳುಕುಹಾಕಿ ವಿರೋಧ ಪಕ್ಷದವರು ನನ್ನ ಹೆಸರನ್ನು ಕೆಡಿಸುತ್ತಿದ್ದಾರೆ. ಆದರೂ ಜನರಿಗೆ ವಾಸ್ತವ ಗೊತ್ತಿದ್ದ ಕಾರಣ ನನ್ನನ್ನು ಗೆಲ್ಲಿಸಿ ಸಚಿವನಾಗಲು ಸಹಕಾರ ಮಾಡಿದ್ದಾರೆ. ನನ್ನ ಗ್ರಾಮದಲ್ಲಿ ನನ್ನ ಜನರೇ ಆದರೂ ಅಕ್ರಮ ನಡೆಸಿದರೆ ನಾನು ಸಹಿಸಲಾರೆ ಎಂದು ಅವರು ತಿಳಿಸಿದರು.
ವಿವಿಧ ಕಡೆ ಇರುವ ಕಲ್ಲಿನ ಕೋರೆಗಳನ್ನು ಈ ಹಿಂದೆ ನಡೆಸುತ್ತಿದ್ದ ರೀತಿಯಲ್ಲಿಯೇ ಸ್ಥಳೀಯ ಪಂಚಾಯತ್ ಗಳಿಗೆ ಆದಾಯ ಬರುವಂತೆ ಹರಾಜು ಮಾಡಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣಿಗಾರಿಕೆ ನಡೆಸಲು ಅನುಮತಿ ನೀಡಬೇಕು ಎಂದು ಉಪ ವಿಭಾಗಾಧಿಕಾರಿ ಆರ್.ಯಶೋಧ ಅವರಿಗೆ ಸಚಿವರು ಸೂಚಿಸಿದರು.
ಯಾವುದೇ ಕಾರಣಕ್ಕೂ ರೈತರು, ವೃದ್ಧರು ತಾಲೂಕು ಕಚೇರಿಗಳಿಗೆ ವಿನಾ ಕಾರಣ ಸುತ್ತುವಂತೆ ಮಾಡಬೇಡಿ. ಒಂದು ದಿನದ ಕೆಲಸಕ್ಕೆ ಹತ್ತಾರು ದಿನ ಅಲೆಸಬೇಡಿ. ಸಾರ್ವಜನಿಕರ ಕೆಲಸಗಳನ್ನು ತುರ್ತಾಗಿ ಮಾಡಿ. ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಸಾಮಾಜಿಕ ಭದ್ರತಾ ಯೋಜನೆಯಲ್ಲಿ ತಾಲೂಕಿನ ಸುಮಾರು 150ಕ್ಕೂ ಹೆಚ್ಚು ವೃದ್ಧರು, ವಿಕಲಚೇತನರು, ವಿಧವೆಯರು ಸೇರಿದಂತೆ ವಿವಿಧ ಫಲಾನುಭವಿಗಳಿಗೆ ಮಾಸಾಸನ ಆದೇಶ ಪತ್ರವನ್ನು ಸಚಿವ ಪುಟ್ಟರಾಜು ವಿತರಿಸಿದರು.
ಜಿಪಂ ಸದಸ್ಯರಾದ ಸಿ.ಅಶೋಕ್, ಶಾಂತಲ, ಅನಸೂಯ, ತಿಮ್ಮೇಗೌಡ, ತಾಪಂ ಅಧ್ಯಕ್ಷೆ ಪೂರ್ಣಿಮಾ ವೆಂಕಟೇಶ್, ಮಾಜಿ ಅಧ್ಯಕ್ಷೆ ರಾಧಮ್ಮ ಕೆಂಪೇಗೌಡ, ಸದಸ್ಯರಾದ ಕೆ.ಪುಟ್ಟೇಗೌಡ, ಗೋಪಾಲೇಗೌಡ, ಗೋವಿಂದಯ್ಯ, ಶಿವಣ್ಣ, ನಿಂಗೇಗೌಡ, ಗೀತಾ, ಗ್ರಾಪಂ ಅಧ್ಯಕ್ಷೆ ಪ್ರೇಮಮ್ಮ, ಇತರ ಮುಖಂಡರು ಉಪಸ್ಥಿತರಿದ್ದರು.







