ನ್ಯಾ.ಜೋಸೆಫ್ ರ ಜ್ಯೇಷ್ಠತೆಯನ್ನು ಬದಲಿಸಿದ ಕೇಂದ್ರದ ವಿರುದ್ಧ ನ್ಯಾಯಾಧೀಶರ ಅಸಮಾಧಾನ

ಹೊಸದಿಲ್ಲಿ,ಆ.5: ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನ್ಯಾ.ಕೆ.ಎಂ. ಜೋಸೆಫ್ ಅವರ ನೇಮಕಾತಿ ಅಧಿಸೂಚನೆಯಲ್ಲಿ ಅವರ ಜ್ಯೇಷ್ಠತೆಯನ್ನು ಬದಲಿಸಿರುವುದಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ಹಲವಾರು ಹಿರಿಯ ನ್ಯಾಯಾಧೀಶರು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ತಾವು ಮು.ನ್ಯಾ.ದೀಪಕ್ ಮಿಶ್ರಾ ಅವರನ್ನು ಭೇಟಿಯಾಗಿ ಕೇಂದ್ರದ ಹಸ್ತಕ್ಷೇಪದ ವಿರುದ್ಧ ದೂರು ಸಲ್ಲಿಸಲು ಉದ್ದೇಶಿಸಿರುವುದಾಗಿ ಹಿರಿಯ ನ್ಯಾಯಾಧೀಶರ ಪೈಕಿ ಓರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಸರಕಾರದ ಅಧಿಸೂಚನೆಯಲ್ಲಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ವಿನೀತ ಸರನ್ ಅವರ ಹೆಸರುಗಳ ಕೆಳಗೆ ನ್ಯಾ.ಜೋಸೆಫ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.
ಇದು ಸರಕಾರದ ರಾಜಾರೋಷ ಹಸ್ತಕ್ಷೇಪವಾಗಿದೆ. ಕೇಂದ್ರಕ್ಕೆ ನ್ಯಾ.ಜೋಸೆಫ್ ಅವರ ಹೆಸರನ್ನು ಮೊದಲು ಕಳುಹಿಸಲಾಗಿತ್ತು ಮತ್ತು ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಅದನ್ನು ಮರುಶಿಫಾರಸು ಮಾಡಿತ್ತು. ನೇಮಕಾತಿ ಅಧಿಸೂಚನೆಯಲ್ಲಿ ಅವರ ಹೆಸರು ಮೊದಲ ಸ್ಥಾನದಲ್ಲಿರಬೇಕಿತ್ತು. ಆದರೆ ಅವರ ಹೆಸರು ತೃತೀಯ ಸ್ಥಾನದಲ್ಲಿದೆ ಮತ್ತು ಇದರಿಂದಾಗಿ ಅವರು ಉಳಿದ ಇಬ್ಬರು ನ್ಯಾಯಾಧೀಶರಿಗಿಂತ ಕಿರಿಯರಾಗಿದ್ದಾರೆ ಎಂದು ಹಿರಿಯ ನ್ಯಾಯಾಧೀಶರು ಹೇಳಿದರು. ನ್ಯಾಯಮೂರ್ತಿಗಳಾದ ಬ್ಯಾನರ್ಜಿ ಮತ್ತು ಸರನ್ ಅವರ ಹೆಸರುಗಳನ್ನು ಜೋಸೆಫ್‌ರ ಬಳಿಕ ಶಿಫಾರಸು ಮಾಡಲಾಗಿತ್ತು ಎಂದು ಅವರು ಬೆಟ್ಟು ಮಾಡಿದರು.
ನ್ಯಾ.ಜೋಸೆಫ್ ಅವರ ಪದೋನ್ನತಿಯು ಸರಕಾರ ಮತ್ತು ಕೊಲಿಜಿಯಂ ನಡುವೆ ಸುದೀರ್ಘ ಬಿಕ್ಕಟ್ಟಿಗೆ ಕಾರಣವಾಗಿತ್ತು. ಕಳೆದ ವಾರ ಕೊಲಿಜಿಯಂ ಅವರ ಹೆಸರನ್ನು ಮರುಶಿಫಾರಸು ಮಾಡಿದ ಬಳಿಕ ಈ ಬಿಕ್ಕಟ್ಟು ಬಗೆಹರಿದಿತ್ತು.







