35ಎ ವಿಧಿ ಕಾಶ್ಮೀರ ಬಂದ್; ಜನಜೀವನ ಅಸ್ತವ್ಯಸ್ತ

ಶ್ರೀನಗರ, ಆ. 5: ಜಮ್ಮು ಹಾಗೂ ಕಾಶ್ಮೀರದಲ್ಲಿ ರಾಜ್ಯದಿಂದ ಹೊರಗಿನವರು ಸ್ಥಿರ ಆಸ್ತಿ ಹೊಂದುವುದನ್ನು ಪ್ರತಿಬಂಧಿಸುವ ವಿಧಿ 35ಎಯ ಸಿಂಧುತ್ವ ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಮನವಿಯ ವಿರುದ್ಧ ಪ್ರತ್ಯೇಕತಾವಾದಿಗಳು ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ರವಿವಾರ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಕಣಿವೆಯಲ್ಲಿ ಬಂದ್ ಶಾಂತಿಯುತವಾಗಿ ನಡೆಯಿತು.
ಯಾವುದೇ ಸ್ಥಳದಲ್ಲಿ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ವಾಹನ ಸಂಚಾರ ಸ್ಥಗಿತಗೊಂಡಿದ್ದವು. ವಿಧಿ 35ಎಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸೋಮವಾರ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಜಂಟಿ ಪ್ರತಿರೋಧ ನಾಯಕತ್ವ (ಜೆಆರ್‌ಎಲ್) ರವಿವಾರ ಹಾಗೂ ಸೋಮವಾರ ಎರಡು ದಿನಗಳ ಬಂದ್‌ಗೆ ಕರೆ ನೀಡಿತ್ತು. ರಾಜ್ಯದಲ್ಲಿ ನಡೆಯಲಿರುವ ಪಂಚಾಯತ್, ನಗರಾಡಳಿತ ಹಾಗೂ ಮುನ್ಸಿಪಾಲ್‌ಗೆ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯನ್ನು ಮುಂದೂಡುವಂತೆ ಕೋರಿ ರಾಜ್ಯ ಸರಕಾರ ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಾರ್‌ಗೆ ಮನವಿ ಸಲ್ಲಿಸಿದೆ.
ನಗರದ ಉದ್ವಿಗ್ನ ಪ್ರದೇಶಗಳಲ್ಲಿ ಭದ್ರತಾ ಪಡೆ ನಿಯೋಜಿಸಲಾಗಿದೆ. ಕಾಶ್ಮೀರದ ಇತರೆಡೆ ಕಾನೂನು ಸುವ್ಯವಸ್ಥೆ ಕಾಪಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೈಯದ್ ಅಲಿ ಶಾ ಗಿಲಾನಿ, ಮಿರ್ವೈಝ್ ಉಮರ್ ಫಾರೂಕ್ ಹಾಗೂ ಮುಹಮ್ಮದ್ ಯಾಸಿನ್ ಮಲ್ಲಿಕ್ ಅವರನ್ನು ಒಳಗೊಂಡ ಜೆಆರ್‌ಎಲ್ ಕರೆ ನೀಡಿದ್ದ ಬಂದ್‌ಗೆ ಬಾರ್ ಅಸೋಸಿಯೇಶನ್, ಸಾರಿಗೆ ಹಾಗೂ ವ್ಯಾಪಾರಿ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.





