ವಿದ್ಯಾರ್ಥಿಗಳು ಪಠ್ಯ ವಿಷಯಗಳಿಗೆ ಸೀಮಿತವಾಗಬಾರದು: ಮಂಡ್ಯ ಜಿಪಂ ಸದಸ್ಯೆ ರೇಣುಕಮ್ಮ ಸಲಹೆ

ಮಂಡ್ಯ, ಆ.5: ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳಿಗೆ ಸೀಮಿತವಾಗದೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ಕೊಪ್ಪ ಜಿಪಂ ಸದಸ್ಯೆ ರೇಣುಕಮ್ಮ ಸಲಹೆ ನೀಡಿದರು.
ಮದ್ದೂರು ತಾಲೂಕಿನ ಕೊಪ್ಪ ಜಿಪಂ ವ್ಯಾಪ್ತಿಯ ಹೊಸಗಾವಿ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ಹೋಬಳಿಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಕ್ರೀಡಾ ಮನೋಭಾವದಿಂದ ಆಟೋಟಗಳನ್ನು ಸ್ವೀಕರಿಸಬೇಕು. ಗೆಲುವು, ಸೋಲುಗಳಿಗೆ ಅಂಜದೆ ಕ್ರೀಡೆಯಲ್ಲಿ ಪಾಲ್ಗೊಂಡು ತಮ್ಮಲ್ಲಿರುವ ಸಾಮರ್ಥ್ಯವನ್ನು ಅನಾವರಣಗೊಳಿಸಬೇಕು ಎಂದು ಅವರು ಹೇಳಿದರು.
ಗ್ರಾಮೀಣ ಭಾಗದ ಮಕ್ಕಳು ಕ್ರೀಡೆ ಹಾಗೂ ಇನ್ನಿತರೆ ಕಾರ್ಯಕ್ರಮಗಳಲ್ಲಿ ಮುಂಚೂಣಿ ಸ್ಥಾನದಲ್ಲಿರುವುದು ಸಂತಸದ ಬೆಳವಣಿಗೆ ಎಂದ ಅವರು, ಕ್ರೀಡೆ ಸ್ನೇಹಿತರನ್ನು ಪರಿಚಯಿಸುವ ಜತೆಗೆ ಪರಸ್ಪರ ಬಾಂಧವ್ಯವನ್ನು ವೃದ್ಧಿಗೊಳಿಸುತ್ತದೆ. ಶಿಕ್ಷಕರು ಉತ್ತಮ ಕ್ರೀಡಾಪಟುಗಳಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಬೇಕು ಎಂದರು.
ಪ್ರಸಕ್ತ ದಿನಗಳಲ್ಲಿ ಯುವಕರು ಕ್ರೀಡೆಗಳಿಂದ ವಿಮುಖವಾಗುತ್ತಿರುವುದು ವಿಷಾದನೀಯ. ಮೊಬೈಲ್, ಕಂಪ್ಯೂರ್ ಗೇಮ್ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ಮಾರಕ. ಪೋಷಕರು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡುವ ಮೂಲಕ ಸರಕಾರದಿಂದ ಸಿಗುವ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ತಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಎಸ್‍ಡಿಎಂಸಿ ಅಧ್ಯಕ್ಷ ಮಹೇಶ್, ದೈಹಿಕ ಶಿಕ್ಷಣ ಶಿಕ್ಷಕರಾದ ರಾಧ, ಕುಮಾರ್, ಜಯೇಂದ್ರ, ಮಲ್ಲಯ್ಯ, ಇತರರು ಹಾಜದ್ದರು.







