ವೆನೆಝವೆಲ ಅಧ್ಯಕ್ಷರ ಹತ್ಯಾಯತ್ನದ ಹೊಣೆ ಹೊತ್ತ ಬಂಡುಕೋರರ ತಂಡ

ಕರಕಾಸ್(ವೆನೆಝುವೆಲ), ಆ.5: ವೆನೆಝುವೆಲದ ಅಧ್ಯಕ್ಷ ನಿಕೋಲಸ್ ಮ್ಯಡುರೊ ಅವರನ್ನು ಹತ್ಯೆಗೈಯಲು ನಡೆಸಿದ ಪ್ರಯತ್ನದ ಹೊಣೆಯನ್ನು ವೆನೆಝುವೆಲದ ನಾಗರೀಕರು ಹಾಗೂ ಸೇನಾಪಡೆಯ ಸದಸ್ಯರನ್ನು ಒಳಗೊಂಡಿರುವ ನಿಗೂಢ ತಂಡವೊಂದು ವಹಿಸಿಕೊಂಡಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮಿಲಿಟರಿ ಕವಾಯತಿನ ಪ್ರಸಾರದ ಸಂದರ್ಭ ನಡೆದಿದ್ದ ಬಾಂಬ್‌ಸ್ಫೋಟದಲ್ಲಿ 7 ಯೋಧರು ಗಾಯಗೊಂಡಿರುವುದಾಗಿ ಸರಕಾರ ತಿಳಿಸಿದೆ. ‘ಶರ್ಟ್ ಧರಿಸಿರುವ ಯೋಧರ ರಾಷ್ಟ್ರೀಯ ಅಭಿಯಾನ’ದ ತಂಡ ಎಂದು ಹೇಳಿಕೊಂಡಿದ್ದ ನಿಗೂಢ ತಂಡವೊಂದು ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ದೇಶವನ್ನು ನಿರಂಕುಶ ಆಡಳಿತದಿಂದ ಪಾರುಗೊಳಿಸಲು, ದೇಶದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ವೆನೆಝುವೆಲಾದ ನಾಗರಿಕರಿಗೆ ನೆರವಾಗುವ ದೇಶಭಕ್ತ ಯೋಧರು ಮತ್ತು ಪೌರರನ್ನು ಒಳಗೊಂಡಿರುವ ತಂಡ ತಮ್ಮದು ಎಂದು ಈ ತಂಡ ಟ್ವಿಟರ್‌ನಲ್ಲಿ ಹೇಳಿಕೆ ನೀಡಿದೆ.
ಸಂವಿಧಾನವನ್ನು ಮರೆತಿರುವ ಜೊತೆಗೆ ಸಾರ್ವಜನಿಕ ಸೇವೆಯ ವ್ಯವಸ್ಥೆಯನ್ನು ಹಣ ಗಳಿಸಿ ಶ್ರೀಮಂತರಾಗಲು ಅಸಹ್ಯಕರ ರೀತಿಯಲ್ಲಿ ಬಳಸಿಕೊಂಡಿರುವವರನ್ನು ಅಧಿಕಾರದಲ್ಲಿ ಮುಂದುವರಿಯಲು ಬಿಡುವುದು ಸೇನೆಯ ಗೌರವಕ್ಕೆ ವಿರುದ್ಧವಾಗಿದೆ ಎಂಬ ಬಂಡುಕೋರ ಸಂಘಟನೆಯ ಹೇಳಿಕೆಯನ್ನು ಅಮೆರಿಕ ಮೂಲದ ಪತ್ರಕರ್ತೆ ಪ್ಯಟ್ರೀಷಿಯಾ ಪೊಲೆಯೊ ಅವರು ತಮ್ಮ ಒಡೆತನದ ಯೂಟ್ಯೂಬ್ ಚ್ಯಾನೆಲ್‌ನಲ್ಲಿ ಓದಿ ಹೇಳಿದರು. ದೇಶದ ಜನತೆ ಹಸಿವಿನಿಂದ ಬಳಲುತ್ತಿರುವಾಗ, ಸರಿಯಾದ ಔಷಧ ದೊರಕದೆ ರೋಗಗ್ರಸ್ತರಾಗಿರುವಾಗ , ದೇಶದ ಕರೆನ್ಸಿ ವೌಲ್ಯ ಕಳೆದುಕೊಂಡಿರುವಾಗ, ಶಿಕ್ಷಣ ವ್ಯವಸ್ಥೆ ತನ್ನ ಕಾರ್ಯದಲ್ಲಿ ವಿಫಲವಾದಾಗ ಅಥವಾ ಶಿಕ್ಷಕರು ಕಮ್ಯುನಿಸಂ ಸಿದ್ಧಾಂತವನ್ನು ಮಾತ್ರ ಉಪದೇಶಿಸುತ್ತಿರುವಾಗ ಮತ್ತು ಸರಕಾರದ ಉದ್ದೇಶ ಸಾಧ್ಯವಾದಷ್ಟು ಮಟ್ಟಿನ ಮೋಜು ಮಸ್ತಿ ಮಾಡುವುದೇ ಆಗಿರುವಾಗ ನಾವು ಇದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ವಿಮೋಚನಾ ಚಳವಳಿಯನ್ನು ಯಶಸ್ವಿಗೊಳಿಸಲು ವೆನೆಝುವೆಲಾದ ನಾಗರಿಕರಾಗಿ ನಾವು ಬೀದಿಗಿಳಿದು ಹೋರಾಟ ಮುಂದುವರಿಸುತ್ತೇವೆ. ಇದರಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಲಾಗಿದೆ. ನೆರೆಯ ಕೊಲಂಬಿಯಾ ದೇಶ ಹಾಗೂ ಅಮೆರಿಕದ ಕೆಲವು ಗುರುತಿಸಲಾಗದ ಶ್ರೀಮಂತರು ಈ ಸ್ಪೋಟ ಪ್ರಕರಣದ ಹಿಂದಿದ್ದಾರೆ ಎಂದು ಅಧ್ಯಕ್ಷ ನಿಕೋಲಸ್ ಮ್ಯಡುರೊ ಆರೋಪಿಸಿದ್ದಾರೆ. ಆದರೆ ಸರಕಾರದ ಕೆಲವು ಅಧಿಕಾರಿಗಳು ವೆನೆಝುವೆಲಾದ ವಿಪಕ್ಷಗಳ ಕೈವಾಡವಿದೆ ಎಂದಿದ್ದಾರೆ. ಆರೋಪವನ್ನು ಕೊಲಂಬಿಯಾ ನಿರಾಕರಿಸಿದೆ. ಘಟನೆಯಲ್ಲಿ ಒಳಗೊಂಡಿರುವ ಕೆಲವರನ್ನು ಬಂಧಿಸಲಾಗಿದ್ದು ಅವರನ್ನು ತೀವ್ರವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಮ್ಯಡುರೊ ತಿಳಿಸಿದ್ದಾರೆ.







