ಬಾಂಗ್ಲಾದೇಶ: ಹಿಂಸೆಗೆ ತಿರುಗಿದ ಪ್ರತಿಭಟನೆ; 115 ವಿದ್ಯಾರ್ಥಿಗಳಿಗೆ ಗಾಯ
ಹಲವೆಡೆ ರಸ್ತೆತಡೆ

ಢಾಕ, ಆ.5: ಬಾಂಗ್ಲಾದೇಶದಲ್ಲಿ ಅಧೋಗತಿಗೆ ಇಳಿದಿರುವ ಸಂಚಾರ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಸಂದರ್ಭ ಪೊಲೀಸರು ಹಾರಿಸಿದ ರಬ್ಬರ್ ಬುಲೆಟ್‌ನಿಂದ 115ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಆದರೆ ಪೊಲೀಸರು ಈ ವರದಿಯನ್ನು ನಿರಾಕರಿಸಿದ್ದು , ಪ್ರತಿಭಟನಾ ನಿರತರ ಮೇಲೆ ರಬ್ಬರ್ ಬುಲೆಟ್ ಅಥವಾ ಅಶ್ರುವಾಯು ಪ್ರಯೋಗಿಸಿಲ್ಲ ಎಂದು ಹೇಳಿದ್ದಾರೆ. ಢಾಕಾದ ಬಳಿಯಿರುವ ಜಿಗಾಟಲ ಪ್ರದೇಶದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸರಕಾರದ ಪರವಾಗಿರುವ ಕಾರ್ಯಕರ್ತರು ಅವರ ಮೇಲೆ ಆಕ್ರಮಣ ನಡೆಸಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಗಳು ರಸ್ತೆಯಲ್ಲಿ ಶಾಂತಿಯುತವಾಗಿ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಈ ಪ್ರದೇಶದಲ್ಲಿ ವಿದ್ಯಾರ್ಥಿಗಳು ಹಾಗೂ ಗುರುತಿಸಲಾಗದ ಕೆಲವು ಯುವಕರು ಪರಸ್ಪರ ದೊಣ್ಣೆ, ಕಲ್ಲಿನಿಂದ ಹೊಡೆದಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆದರೆ ತಮ್ಮ ಪ್ರತಿಭಟನಾ ರ್ಯಾಲಿ ಹಾದುಹೋಗುವುದಕ್ಕೂ ಮೊದಲೇ ಈ ಪ್ರದೇಶದಲ್ಲಿದ್ದ ರಾಜಕೀಯ ಪಕ್ಷದ ಕಚೇರಿಯ ಮೇಲೆ ಶಾಲಾ ಸಮವಸ್ತ್ರ ಧರಿಸಿದ್ದ ಅಪರಿಚಿತ ಯುವಕರ ತಂಡ ದಾಳಿ ನಡೆಸಿ ದಾಂಧಲೆ ನಡೆಸಿದೆ. ಇದು ವಿದ್ಯಾರ್ಥಿಗಳ ಕೃತ್ಯವಲ್ಲ .ಬಳಿಕ ಪೊಲೀಸರು ಪ್ರತಿಭಟನಾ ನಿರತರ ಮೇಲೆ ರಬ್ಬರ್ ಗುಂಡು ಹಾರಿಸಿದ್ದಲ್ಲದೆ ಅಶ್ರುವಾಯು ಸಿಡಿಸಿದ್ದಾರೆ. ಘಟನೆಯಲ್ಲಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ 115ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದು ಇವರಲ್ಲಿ ಹಲವರು ರಬ್ಬರ್ ಬುಲೆಟ್‌ನಿಂದ ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗದ ವೈದ್ಯ ಅಬ್ದುಸ್ ಶಬ್ಬೀರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ನಾವು ಇಲ್ಲಿ ಭೀತಿಯ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಶಾಂತಿಯುತ ಪ್ರತಿಭಟನೆ ನಡೆಸುವುದು ನಮ್ಮ ಆಶಯವಾಗಿದೆ. ಆದರೂ ನಮ್ಮ ಸಹೋದರರ ಮೇಲೆ ರಬ್ಬರ್ ಗುಂಡು ಎಸೆಯಲಾಗಿದೆ ಎಂದು ಸಬೀರ್ ಹುಸೈನ್ ಎಂಬ ವಿದ್ಯಾರ್ಥಿ ಅಳಲು ತೋಡಿಕೊಂಡಿದ್ದಾನೆ.
ಕಳೆದ 17 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು ಶನಿವಾರ ಶಾಲಾ ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿಗಳು ಸುರಿಯುತ್ತಿದ್ದ ಮಳೆಯ ಮಧ್ಯೆಯೇ ರಸ್ತೆಗಿಳಿದು, ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿ ರಸ್ತೆತಡೆ ನಡೆಸಿದರು. 13 ವರ್ಷ ಪ್ರಾಯದ ವಿದ್ಯಾರ್ಥಿಗಳೂ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ವಾಹನಗಳಿಗೆ ಸಕ್ರಮ ಲೈಸೆನ್ಸ್ ಇದೆಯೇ ಮತ್ತು ಸಂಚಾರಯೋಗ್ಯವಾಗಿವೆಯೇ ಎಂದು ಪರಿಶೀಲನೆ ನಡೆಸಿದರು. ನಮ್ಮ ಬೇಡಿಕೆ ಈಡೇರುವವರೆಗೆ ನಾವು ಹಿಂದೆ ಸರಿಯುವುದಿಲ್ಲ. ಸುರಕ್ಷಿತ ರಸ್ತೆ ಮತ್ತು ಸುರಕ್ಷಿತ ವಾಹನ ಚಾಲಕರು- ಇದು ನಮ್ಮ ಬೇಡಿಕೆಯಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಢಾಕಾದ ಸಚಿವ ಶಹಜಹಾನ್ ಖಾನ್, ಢಾಕಾದಲ್ಲಿ ಇಬ್ಬರು ವಿದ್ಯಾರ್ಥಿಗಳು ಸತ್ತರೆ ಯಾಕಿಷ್ಟು ಗಲಭೆ. ಆದರೆ ಭಾರತದಲ್ಲಿ ಬಸ್ಸು ಅಪಘಾತದಲ್ಲಿ 33 ಮಂದಿ ಸತ್ತರೂ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಹೇಳಿದ್ದರು. ಇದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಸಚಿವರ ರಾಜೀನಾಮೆಗೆ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಮಂದಿ ಒತ್ತಾಯಿಸಿದ್ದರು.
ಮನ ಒಲಿಸುವ ಪ್ರಯತ್ನ ವಿಫಲ ಈ ಮಧ್ಯೆ, ಸಂಚಾರ ದುಸ್ಥಿತಿ ವಿರೋಧಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಸರಕಾರಿ ವಿರೋಧಿ ಪ್ರತಿಭಟನೆಯಾಗಿ ಮಾರ್ಪಡುವ ಸಾಧ್ಯತೆ ಮನಗಂಡಿರುವ ಹಲವು ಪ್ರಭಾವೀ ಸಚಿವರು ವಿದ್ಯಾರ್ಥಿಗಳ ಮನ ಒಲಿಸಿ ಅವರನ್ನು ತರಗತಿಗೆ ಮರಳುವಂತೆ ಒತ್ತಾಯಿಸಿದರು. ಈ ವರ್ಷಾಂತ್ಯ ಮಹಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸರಕಾರದ ವಿರೋಧಿ ಪ್ರತಿಭಟನೆ ನಡೆದರೆ ಅದರಿಂದ ಸರಕಾರಕ್ಕೆ ಹಿನ್ನಡೆಯಾಗಬಹುದು ಎಂಬ ಕಾರಣಕ್ಕೆ ಸಚಿವರು ವಿದ್ಯಾರ್ಥಿಗಳೊಡನೆ ಮಾತಕುತೆ ನಡೆಸಿದರು. ಆದರೆ ತಮ್ಮ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದ ವಿದ್ಯಾರ್ಥಿಗಳು ಸಚಿವರ ಕೋರಿಕೆಯನ್ನು ಮನ್ನಿಸಲಿಲ್ಲ.







