ಹೆಂಡ್ರಿಕ್ಸ್ ಚೊಚ್ಚಲ ಶತಕ ; ಹರಿಣ ಪಡೆಗೆ ಜಯ
5 ಪಂದ್ಯಗಳ ಏಕದಿನ ಸರಣಿ 3-0 ಅಂತರದಲ್ಲಿ ಕೈವಶ

ಪಲ್ಲೆಕೆಲೆ, ಆ.5: ಚೊಚ್ಚಲ ಪಂದ್ಯದಲ್ಲೇ ರೀಝಾ ಹೆಂಡ್ರಿಕ್ಸ್ ದಾಖಲಿಸಿದ ಶತಕದ ನೆರವಿನಲ್ಲಿ ದಕ್ಷಿಣ ಆಫ್ರಿಕ ತಂಡ ಇಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 78 ರನ್‌ಗಳ ಜಯ ಗಳಿಸಿದೆ. ಐದು ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಎರಡು ಪಂದ್ಯಗಳು ಆಡಲು ಬಾಕಿ ಇರುವಾಗಲೇ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಗೆಲುವಿಗೆ 364 ರನ್‌ಗಳ ಸವಾಲನ್ನು ಪಡೆದ ಶ್ರೀಲಂಕಾ ತಂಡ 45.2 ಓವರ್‌ಗಳಲ್ಲಿ 285 ರನ್‌ಗಳಿಗೆ ಆಲೌಟಾಗಿದೆ.
ಶ್ರೀಲಂಕಾ ತಂಡದ ಧನಂಜಯ್ ಡಿಸಿಲ್ವ ವೃತ್ತಿ ಬದುಕಿನಲ್ಲಿ ಗರಿಷ್ಠ 84 ರನ್‌ಗಳ ಕೊಡುಗೆ ನೀಡಿ ಹೋರಾಟ ನಡೆಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ.
ಆಫ್ರಿಕ ತಂಡದ ವೇಗಿ ಲುಂಗಿ ಗಿಡಿ 4 ವಿಕೆಟ್ ಮತ್ತು ಅಂಡ್ಲೆ ಫೆಹ್ಲುಕ್ವಾಯೊ 3 ವಿಕೆಟ್ ಉಡಾಯಿಸುವ ಮೂಲಕ ಶ್ರೀಲಂಕಾ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.
ದ.ಆಫ್ರಿಕ ತಂಡದ ಹೆಂಡ್ರಿಕ್ಸ್ 12 ಟ್ವೆಂಟಿ -20 ಪಂದ್ಯಗಳನ್ನಾಡಿದ್ದರು. ಅವರು ಇಂದು ಆಡಿದ ಚೊಚ್ಚಲ ಏಕದಿನ ಪಂದ್ಯದಲ್ಲಿ 102 ರನ್(89ಎ, 8ಬೌ,1ಸಿ) ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.
ಹೆಂಡ್ರಿಕ್ಸ್ ಚೊಚ್ಚಲ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದ ದಕ್ಷಿಣ ಆಫ್ರಿಕ ತಂಡದ ಮೂರನೇ ದಾಂಡಿಗ ಎನಿಸಿಕೊಂಡಿದ್ದಾರೆ. ಜೀನ್ ಪಾಲ್ ಡುಮಿನಿ 70 ಎಸೆತಗಳಲ್ಲಿ 92 ರನ್, ಹಾಶಿಮ್ ಅಮ್ಲ(59) ಮತ್ತು ಡೇವಿಡ್ ಮಿಲ್ಲರ್(51) ಅರ್ಧಶತಕಗಳ ನೆರವಿನಲ್ಲಿ ದಕ್ಷಿಣ ಆಫ್ರಿಕದ ಗೆಲುವಿಗೆ ನೆರವಾದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 363 ರನ್ ಗಳಿಸಿತ್ತು.
ಆರಂಭಿಕ ದಾಂಡಿಗ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಮತ್ತು ಹಾಶಿಮ್ ಅಮ್ಲ ಮೊದಲ ವಿಕೆಟ್‌ಗೆ 6 ಓವರ್‌ಗಳಲ್ಲಿ 42 ರನ್ ಗಳಿಸಿದರು. ಡಿ ಕಾಕ್ ಅವರು ಅಮ್ಲಗೆ ಉತ್ತಮ ಜೊತೆಯಾಟ ನೀಡಿದರು. ಆದರೆ ಡಿ ಕಾಕ್ ಕೇವಲ 8 ಎಸೆತಗಳಲ್ಲಿ 2 ರನ್ ಗಳಿಸಿ ನಿರ್ಗಮಿಸಿದರು. ಎರಡನೇ ವಿಕೆಟ್‌ಗೆ ಅಮ್ಲ ಮತ್ತು ಹೆಂಡ್ರಿಕ್ಸ್ ಜೊತೆಯಾಟದಲ್ಲಿ 59 ರನ್ ದಾಖಲಿಸಿದರು.
4ನೇ ವಿಕೆಟ್‌ಗೆ ಜೊತೆಯಾಟದಲ್ಲಿ ಹೆಂಡ್ರಿಕ್ಸ್ ಮತ್ತು ಡುಮಿನಿ 78 ರನ್‌ಗಳ ಕೊಡುಗೆ ನೀಡಿದರು. ಬಳಿಕ ಐದನೇ ವಿಕೆಟ್‌ಗೆ ಡುಮಿನಿ ಮತ್ತು ಮಿಲ್ಲರ್ 103 ರನ್‌ಗಳ ಕೊಡುಗೆ ನೀಡಿದರು. ಮಿಲ್ಲರ್ ವೇಗದ 51 ರನ್ ಮತ್ತು ಫೆಹ್ಲುಕ್ವಾಯೊ 11 ಎಸೆತಗಳಲ್ಲಿ 24 ರನ್ ಗಳಿಸಿದರು. ದ.ಆಫ್ರಿಕ ಕೊನೆಯ 7 ಓವರ್‌ಗಳಲ್ಲಿ 98 ರನ್ ಕಲೆ ಹಾಕಿತು. ಇದರಿಂದಾಗಿ ತಂಡದ ಸ್ಕೋರ್ 360 ರನ್‌ಗಳ ಗಡಿ ದಾಟಿತು.







