ಹಾಲಿ ಚಾಂಪಿಯನ್ ಝ್ವೆರೆವ್ ಫೈನಲ್‌ಗೆ

ವಾಶಿಂಗ್ಟನ್, ಆ.5: ಹಾಲಿ ಚಾಂಪಿಯನ್ ಅಲೆಕ್ಸಾಂಡರ್ ಝ್ವೆರೆವ್ ಗ್ರೀಸ್‌ನ ಸ್ಟೆಫನೊಸ್ ಸಿಟ್‌ಸಿಪಾಸ್‌ರನ್ನು 6-2, 6-4 ಅಂತರದಿಂದ ಸೋಲಿಸುವುದರೊಂದಿಗೆ ಸಿಟಿ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದಾರೆ.
ವಿಶ್ವದ ನಂ.3ನೇ ಆಟಗಾರ ಝ್ವೆರೆವ್ ಶನಿವಾರ ನಡೆದಿದ್ದ ಸೆಮಿ ಫೈನಲ್‌ನಲ್ಲಿ ಕೇವಲ 87 ನಿಮಿಷಗಳಲ್ಲಿ ಗ್ರೀಸ್ ಆಟಗಾರರನ್ನು ಮಣಿಸಿದರು. ಈ ವರ್ಷ 40ನೇ ಪಂದ್ಯವನ್ನು ಗೆದ್ದುಕೊಂಡ ಸಾಧನೆ ಮಾಡಿದರು. ಝ್ವೆರೆವ್ ಈ ವರ್ಷ ಮೂರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ರವಿವಾರ ರಾತ್ರಿ ನಡೆಯುವ ಫೈನಲ್‌ನಲ್ಲಿ ರಶ್ಯದ ಆ್ಯಂಡ್ರೆ ರುಬ್ಲೆವ್ ಅಥವಾ ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್‌ರನ್ನು ಎದುರಿಸಲಿದ್ದಾರೆ.
ಕುಝ್ನೆಸೋವಾ ಫೈನಲ್‌ಗೆ ಲಗ್ಗೆ: ಜರ್ಮನಿಯ ಆ್ಯಂಡ್ರಿಯಾ ಪೆಟ್ಕೋವಿಕ್‌ರನ್ನು ನೇರ ಸೆಟ್‌ಗಳಿಂದ ಮಣಿಸಿದ ರಶ್ಯ ಆಟಗಾರ್ತಿ ಸ್ವೆತ್ಲಾನಾ ಕುಝ್ನೆಸೋವಾ ಸಿಟಿ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದಾರೆ.
ಇಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಮಾಜಿ ನಂ.2ನೇ ಆಟಗಾರ್ತಿ ಕುಝ್ನೆಸೋವಾ ಅವರು ಪೆಟ್ಕೊವಿಕ್‌ರನ್ನು 6-2, 6-2 ನೇರ ಸೆಟ್‌ಗಳಿಂದ ಸೋಲಿಸಿದರು. ಈ ಮೂಲಕ ಸುಮಾರು ಒಂದು ವರ್ಷದ ಬಳಿಕ ಡಬ್ಲುಟಿಎ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. 2017ರ ಮಾರ್ಚ್‌ನಲ್ಲಿ ಪಾರಿಬಸ್ ಓಪನ್‌ನಲ್ಲಿ ಕೊನೆಯ ಬಾರಿ ಫೈನಲ್‌ಗೆ ಪ್ರವೇಶಿಸಿದ್ದರು.
2014ರಲ್ಲಿ ವಾಶಿಂಗ್ಟನ್ ಟೂರ್ನಮೆಂಟ್‌ನ್ನು ಗೆದ್ದುಕೊಂಡಿರುವ ಕುಝ್ನೆಸೋವಾ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಡೊನ್ನಾ ವೆಕಿಕ್‌ರನ್ನು ಎದುರಿಸಲಿದ್ದಾರೆ. ವೆಕಿಕ್ ಚೀನಾದ ಸೈಸೈ ಝೆಂಗ್‌ರನ್ನು 7-5, 6-3 ಸೆಟ್‌ಗಳಿಂದ ಸೋಲಿಸಿದ್ದಾರೆ.







