ಮಯಾಂಕ್ ದ್ವಿಶತಕ, ಪೃಥ್ವಿ ಶತಕ

ಬೆಂಗಳೂರು, ಆ.5: ಆರಂಭಿಕ ಆಟಗಾರರಾದ ಮಯಾಂಕ್ ಅಗರ್ವಾಲ್ ದ್ವಿಶತಕ(220) ಹಾಗೂ ಯುವ ಆಟಗಾರ ಪೃಥ್ವಿ ಶಾ(136)ಶತಕದ ಕೊಡುಗೆಯ ನೆರವಿನಿಂದ ಭಾರತ ‘ಎ’ ತಂಡ ದಕ್ಷಿಣ ಆಫ್ರಿಕ ‘ಎ’ ತಂಡದ ವಿರುದ್ಧ ಪ್ರಥಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 411 ರನ್ ಗಳಿಸಿದೆ. 2ನೇ ದಿನವಾದ ರವಿವಾರ ಮುಹಮ್ಮದ್ ಸಿರಾಜ್(5-56)ಸಾಹಸದಿಂದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕವನ್ನು 246 ರನ್‌ಗೆ ನಿಯಂತ್ರಿಸಿದ ಭಾರತ ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿ 165 ರನ್ ಮುನ್ನಡೆಯಲ್ಲಿದೆ.
ಇನಿಂಗ್ಸ್ ಆರಂಭಿಸಿದ 18ರ ಹರೆಯದ ಶಾ ಹಾಗೂ ಕನ್ನಡಿಗ ಅಗರ್ವಾಲ್ ಮೊದಲ ವಿಕೆಟ್‌ಗೆ 277 ರನ್ ಜೊತೆಯಾಟ ನಡೆಸಿ ಭದ್ರಬುನಾದಿ ಹಾಕಿಕೊಟ್ಟರು. ತವರು ಮೈದಾನದಲ್ಲಿ 8ನೇ ಪ್ರಥಮ ದರ್ಜೆ ಶತಕ ಸಿಡಿಸಿದ ಮಯಾಂಕ್(220, 250ಎಸೆತ, 31 ಬೌಂಡರಿ, 4 ಸಿಕ್ಸರ್)ಮತ್ತೊಂದು ದೊಡ್ಡ ಇನಿಂಗ್ಸ್‌ನತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಶಾ 20 ಬೌಂಡರಿ 1 ಸಿಕ್ಸರ್ ನೆರವಿನಿಂದ 7ನೇ ಶತಕ ಸಿಡಿಸಿದ್ದಾರೆ.
ಕಳೆದ ವರ್ಷ ದೇಶೀಯ ಕ್ರಿಕೆಟ್‌ನಲ್ಲಿ 1,000ಕ್ಕೂ ಅಧಿಕ ರನ್ ಗಳಿಸಿದ್ದ ಮಯಾಂಕ್ ಕರ್ನಾಟಕದ ತನ್ನ ಸಹ ಆಟಗಾರ ಆರ್.ಸಮರ್ಥ್(37)ರೊಂದಿಗೆ 2ನೇ ವಿಕೆಟ್‌ಗೆ 118 ರನ್ ಸೇರಿಸಿ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಇಂಗ್ಲೆಂಡ್ ಪ್ರವಾಸದ ವೇಳೆಯೂ ಉತ್ತಮ ಪ್ರದರ್ಶನ ನೀಡಿದ್ದ ಶಾ ಹಾಗೂ ಅಗರ್ವಾಲ್ ಇಂದು ದ.ಆಫ್ರಿಕ ದಾಂಡಿಗರನ್ನು ದಂಡಿಸುತ್ತಿದ್ದ ವೇಳೆ ಮುಖ್ಯ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದರು.







