ಆಟಿ ಆಚರಣೆಯಲ್ಲಿ ಪೂರ್ವಿಕರು ಬಳಸುತ್ತಿದ್ದ ಆಹಾರ ಪದ್ಧತಿಯನ್ನು ಉಳಿಸಿ ಬೆಳೆಸುವ ಕಾರ್ಯವಾಗಲಿ: ಶ್ರೀಧರ ಶೆಟ್ಟಿ ಪುಳಿಂಚ

ಬಂಟ್ವಾಳ, ಜು. 6: ಬಂಟರ ಸಂಘ ಕಲ್ಲಡ್ಕ ವಲಯದ ಆಶ್ರಯದಲ್ಲಿ 5ನೆ ವರ್ಷದ ಆಟಿಡೊಂಜಿ ದಿನ ರವಿವಾರ ಬಾಳ್ತಿಲ ಪಂಚಾಯಿತಿನ ಸುವರ್ಣ ಸೌಧದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಕೆ.ಪದ್ಮನಾಭ ರೈ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿಸಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವ ಮೂಲಕ ಬಂಟರ ಸಂಘದ ಕಲ್ಲಡ್ಕ ವಲಯ ವಿಶೇಷವಾಗಿ ಗುರುತಿಸಿಕೊಂಡಿದೆ. ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಮಾಹಿತಿಯ ಬಗ್ಗೆಯೂ ಮುಂದಿನ ದಿನಗಳಲ್ಲಿ ಕಾರ್ಯಕ್ರಮವನ್ನು ರೂಪಿಸುವ ಚಿಂತನೆ ಇದೆ ಎಂದರು.
ಮಂಗಳೂರಿನ ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ ಮುಖ್ಯ ಅತಿಥಿಯಾಗಿ ಮಾತನಾಡಿ, ಐದು ಗ್ರಾಮದವರು ಒಟ್ಟು ಸೇರಿಕೊಂಡು ಆಟಿ ತಿಂಗಳನ್ನು ನೆನಪು ಮಾಡಿಕೊಳ್ಳುವುದು ಮಾದರಿ ಕಾರ್ಯಕ್ರಮ. ಆಟಿ ತಿಂಗಳಿನಲ್ಲಿ ನಮ್ಮ ಪೂರ್ವಿಕರು ಬಳಸುತ್ತಿದ್ದ ಆಹಾರ ಪದ್ಧತಿಯನ್ನು ಆಟಿ ಆಚರಣೆ ಮೂಲಕ ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದರು.
ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಮಾತನಾಡಿ, ಬಂಟ ಸಮುದಾಯದವರು ಸ್ವಾಭಿಮಾನದ ಜೀವನವನ್ನು ಬದುಕುತ್ತಿದ್ದಾರೆ. ಬಂಟರಿಗೆ ಸ್ವಾಭಿಮಾನದ ಕೆಚ್ಚು ರಕ್ತಗತವಾಗಿಯೇ ಬಂದಿದೆ. ಕೌಶಲ್ಯತೆಯ ಕೊರತೆಯಿಂದ ಸ್ವಲ್ಪ ಹಿಂದೆ ಬಿದ್ದರೂ ಸಮಾಜದಲ್ಲಿ ಮುಂದೆ ಬರುವ ಅಗತ್ಯತೆ ಇದೆ ಎಂದರು.
ಎಸ್‍ವಿಎಸ್ ಕಾಲೇಜಿನ ಉಪನ್ಯಾಸಕಿ ಮಂಜುಳಾ ಡಿ.ಶೆಟ್ಟಿ ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ನರಹರಿ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಪ್ರತಿಭಾ ಎ ರೈ, ಪ್ರಶಾಂತ್ ಮಾರ್ಲ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಗ್ರಾಮ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಕೊಳಕೀರು, ಲೋಕನಾಥ ಶೆಟ್ಟಿ ಅಮ್ಟೂರು, ರಾಮಣ್ಣ ಶೆಟ್ಟಿ ಸುಧೇಕಾರು, ದೇವಿಪ್ರಸಾದ್ ಶೆಟ್ಟಿ ಬೆಂಜತ್ತಿಮಾರು, ಬಾಲಕೃಷ್ಣ ಆಳ್ವ ಬೊಂಡಾಲ, ಪ್ರೇಮನಾಥ ಶೆಟ್ಟಿ ಅಂತರ ಹಾಜರಿದ್ದರು. ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ತ್ಯಾಂಪಣ್ಣ ರೈ ಕೂವೆಕೋಡಿ, ನಿವೃತ್ತ ಅಧ್ಯಾಪಕ ಅಮ್ಮುಶೆಟ್ಟಿ ಬೆಂಜತ್ತಿಮಾರು, ಸಮಾಜಸೇವಕಿ ಭುವನೇಶ್ವರಿ ಮಾರ್ಲ ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ರಾಮಣ್ಣ ಶೆಟ್ಟಿ ಸುಧೇಕಾರು ಸ್ವಾಗತಿಸಿ, ಸುರೇಶ್ ಶೆಟ್ಟಿ ಕಾಂದಿಲ ವಂದಿಸಿದರು, ಜಗದೀಶ ರೈ ಕಾರ್ಯಕ್ರಮ ನಿರೂಪಿಸಿದರು.







