ಮಡಿಕೇರಿ: ನಾಲೆಗೆ ಮಗುಚಿದ ಕಾರು; ಒಂದೇ ಕುಟುಂಬದ ನಾಲ್ವರು ಮೃತ್ಯು

ಮಡಿಕೇರಿ, ಆ.6: ಹಾರಂಗಿ ನಾಲೆಗೆ ಕಾರು ಮಗುಚಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಪಿರಿಯಾಪಟ್ಟಣ ತಾಲೂಕಿನ ಮಂಟಿಕೊಪ್ಪಲು ಗ್ರಾಮದ ಬಳಿ ಸೋಮವಾರ ನಡೆದಿದೆ.
ಮೃತರನ್ನು ನಾಪೋಕ್ಲು ನಿವಾಸಿಗಳಾದ ಪಳನಿಸ್ವಾಮಿ (45) ಸಂಜುಕುಮಾರಿ (34) ಪೂರ್ಣಿಮಾ(19) ಹಾಗೂ ಲಿಖಿತ್(15) ಎಂದು ಗುರುತಿಸಲಾಗಿದೆ. ಪಳನಿಸ್ವಾಮಿ ಕುಟುಂಬದವರು ಕುಶಾಲನಗರ ಮಾರ್ಗವಾಗಿ ಪಿರಿಯಾಪಟ್ಟಣ ತಾಲೂಕಿಗೆ ಸೇರಿದ ದೊಡ್ಡಕಮರವಳ್ಳಿ ಅಂಚೆ ಕಚೇರಿಗೆ ತೆರಳಿ, ಅಲ್ಲಿಂದ ಚನಕಲ್ ಸಮೀಪದ ಲಕ್ಷ್ಮೀಪುರ ಗ್ರಾಮದಲ್ಲಿರುವ ತಮ್ಮ ಜಮೀನಿಗೆ ಹೋಗುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
ಮೃತರು ಮೂಲತಃ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯ ಲಕ್ಷ್ಮಿಪುರ ಗ್ರಾಮದಲ್ಲಿ ಜಮೀನನ್ನು ಹೊಂದಿದ್ದು, ಕಳೆದ 10 ವರ್ಷಗಳಿಂದ ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ನೆಲೆಸಿದ್ದಾರೆ. ಗಾರೆ ಕೆಲಸದ ನಿರ್ವಹಿಸುತ್ತಿದ್ದ ಪಳನಿಸ್ವಾಮಿಯವರ ಮಕ್ಕಳಾದ ಪೂರ್ಣಿಮಾ ಮತ್ತು ಲಿಖಿತ್ ಇಬ್ಬರೂ ಸಹ ಅಂಗವಿಕಲರಾಗಿದ್ದು, ಇವರಿಗೆ ಸರ್ಕಾರದಿಂದ ಬರುವ ಅಂಗವಿಕಲರ ವೇತನವನ್ನು ದೊಡ್ಡಕಮರವಳ್ಳಿ ಅಂಚೆ ಕಚೇರಿಯಿಂದ ಪಡೆದುಕೊಂಡು, ಲಕ್ಷ್ಮೀಪುರದ ತಮ್ಮ ಜಮೀನಿಗೆ ತಮ್ಮ ಓಮ್ನಿ ಕಾರಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ.
ಕೊಪ್ಪ-ರಾಮನಾಥಪುರ ಸಂಪರ್ಕ ರಸ್ತೆಯ ಮಂಟಿಕೊಪ್ಪಲು ಗ್ರಾಮದ ಸಮೀಪ ಕಾರು ಚಾಲನೆ ಮಾಡುತ್ತಿದ್ದ ಪಳನಿಸ್ವಾಮಿ ಅವರ ನಿಯಂತ್ರಣ ತಪ್ಪಿದ ವಾಹನ ತುಂಬಿ ಹರಿಯುತ್ತಿರುವ ಹಾರಂಗಿ ಬಲದಂಡೆ ನಾಲೆಗೆ ಬಿದ್ದಿದೆ. ಓಮ್ನಿ ಕಾರು ನೀರಿನ ಸೆಳೆತಕ್ಕೆ ನಾಲೆಯೊಳಗೆ ಹಲವು ಮೀಟರ್ ಗಳಷ್ಟು ಒಳಗೆ ಸಾಗಿದ್ದು, ವಾಹನದೊಳಗಿದ್ದವರು ನೀರಿನಲ್ಲಿ ಉಸಿರುಗಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು ಹರಸಾಹಸದಿಂದ ವಾಹನವನ್ನು ಮೇಲೆತ್ತಿ, ವಾಹನದೊಳಗಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬೆಟ್ಟದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಶವ ಪರೀಕ್ಷೆ ನಡೆಸಿ ಮೃತದೇಹಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.







