ಮತ್ತೆ ಹದಗೆಟ್ಟ ಕರುಣಾನಿಧಿ ಆರೋಗ್ಯ

ಚೆನ್ನೈ, ಆ. 6: ಚೆನ್ನೈಯ ಕಾವೇರಿ ಆಸ್ಪತ್ರೆಗೆ ಒಂದು ವಾರದ ಹಿಂದೆ ದಾಖಲಾಗಿದ್ದ ಡಿಎಂಕೆ ಅಧ್ಯಕ್ಷ ಹಾಗೂ ತಮಿಳು ನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದೆ. ವಯೋ ಸಂಬಂಧಿ ಅನಾರೋಗ್ಯ ಅವರ ಪ್ರಮುಖ ಅಂಗಳ ಕಾರ್ಯ ನಿರ್ವಹಣೆಗೆ ಸವಾಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.
‘‘ಅವರ ಬಗ್ಗೆ ನಿರಂತರ ನಿಗಾ ಇರಿಸಲಾಗಿದೆ ಹಾಗೂ ಸಕ್ರಿಯ ವೈದ್ಯಕೀಯ ಬೆಂಬಲದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಅವರ ಸ್ಪಂದನೆ ಅನುಸರಿಸಿ ಅವರ ಆರೋಗ್ಯದ ಸ್ಥಿತಿ ನಿರ್ಣಯಿಸಬಹುದು.’’ ಎಂದು ಆಸ್ಪತ್ರೆ ಸೋಮವಾರ ಸಂಜೆ ನೀಡಿದ ಹೇಳಿಕೆ ತಿಳಿಸಿದೆ.
ಮೂತ್ರ ನಾಳದ ಸೋಂಕಿನ ಹಿನ್ನೆಲೆಯಲ್ಲಿ 94 ವರ್ಷದ ಕರುಣಾನಿಧಿ ಅವರನ್ನು ಜುಲೈ 28ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯಸ್ಸಿನ ಕಾರಣದಿಂದ ಅವರ ಸಾಮಾನ್ಯ ಆರೋಗ್ಯ, ಯಕೃತ್ತು ಕಾರ್ಯನಿರ್ವಹಣೆ, ರಕ್ತವಿಜ್ಞಾನದ ಮಾನದಂಡಗಳು ಸಂಪೂರ್ಣವಾಗಿ ಕ್ಷೀಣಿಸಿದೆ ಎಂದು ಹೇಳಿಕೆ ತಿಳಿಸಿದೆ. ರಾಜಕೀಯ ನಾಯಕರು ಕರುಣಾನಿಧಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ನಟ-ರಾಜಕಾರಣಿ ಕಮಲ್ ಹಾಸನ್ ಹಾಗೂ ರಜನಿಕಾಂತ್; ನಟರಾದ ವಿಜಯ್, ಅಜಿತ್ ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿದ್ದರು.







