ಹೆಸರು ಬದಲಿಸಿದ ಮಾತ್ರಕ್ಕೆ ಸಮಯಕ್ಕೆ ಸರಿಯಾಗಿ ರೈಲು ಬಾರದು ಎಂದ ಉ.ಪ್ರದೇಶ ಸಚಿವ
ಮುಘಲ್ ಸರೈ ನಿಲ್ದಾಣದ ಹೆಸರು ಬದಲಾವಣೆ

ಭೋಪಾಲ್, ಆ.6: ಉತ್ತರ ಪ್ರದೇಶದ ಮುಘಲ್‍ಸರೈ ರೈಲು ನಿಲ್ದಾಣವನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್ ರಾಜಭರ್, ಕೇವಲ ಹೆಸರು ಬದಲಾವಣೆಯಿಂದ ಅಭಿವೃದ್ಧಿಯಾಗದು ಅಥವಾ ರೈಲು ಸಮಯಕ್ಕೆ ಸರಿಯಾಗಿ ಬಾರದು ಎಂದಿದ್ದಾರೆ.
ಝಹೂರಾಬಾದ್ ಕ್ಷೇತ್ರವನ್ನು ಪ್ರತಿನಿಧಿಸುವ ರಾಜಭರ್ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ, ಭಾರತೀಯ ರೈಲ್ವೆಯ ನಿರ್ವಹಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸರಕಾರ ಮೊದಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ರವಿವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಹಾಗೂ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಜತೆಯಾಗಿ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ರೈಲು ನಿಲ್ದಾಣವನ್ನು ಉದ್ಘಾಟಿಸಿದ್ದರು. ರಾಜ್ಯದ ಅತ್ಯಂತ ದೊಡ್ಡದಾದ ಹಾಗೂ ಹಳೆಯದಾದ ಈ ರೈಲು ನಿಲ್ದಾಣವನ್ನು ಈ ಸಮಾರಂಭಕ್ಕಾಗಿ ಕೇಸರಿಮಯಗೊಳಿಸಲಾಗಿತ್ತು. ಆದಿತ್ಯನಾಥ್ ಅವರು ಈ ರೈಲು ನಿಲ್ದಾಣ ಮರುನಾಮಕರಣ ಪ್ರಸ್ತಾಪವನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಮುಂದಿಟ್ಟಿದ್ದು ಅದನ್ನು ಕೇಂದ್ರ ನಂತರ ಅನುಮೋದಿಸಿತ್ತು.







