ಮನ್ ಕಿ ಬಾತ್’ನಲ್ಲಿ ಮೋದಿ ಹಾಡಿ ಹೊಗಳಿದ್ದ ರಿಕ್ಷಾವಾಲಾ ಅಹ್ಮದ್ ರ ಕಥೆ ಗೊತ್ತಾ?
ಇವರ ಹಿನ್ನೆಲೆ, ಸಾಧನೆಯೇನು?: ಇಲ್ಲಿದೆ ಮಾಹಿತಿ

ಹೊಸದಿಲ್ಲಿ, ಆ.6: ತಮ್ಮ 42ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂ ರಾಜ್ಯದ ರಿಕ್ಷಾವಾಲ 82 ವರ್ಷದ ಅಹ್ಮದ್ ಅಲಿಯವರ ಬಗ್ಗೆ ಹೇಳಿದ್ದರು. ಅದಕ್ಕೆ ಕಾರಣವಿದೆ, ಅಹ್ಮದ್ ತಮ್ಮ ಸ್ವಂತ ಹಣದಿಂದ ಒಂಬತ್ತು ಶಾಲೆಗಳನ್ನು ತೆರೆದಿದ್ದಾರೆ.
ಕರೀಂ ಗಂಜ್ ಜಿಲ್ಲೆಯವರಾಗಿರುವ ಅಹ್ಮದ್ ಅಲಿ, ಪತ್ತರಕಂಡಿ ಎಂಬಲ್ಲಿನ ಮಧುರಬಂದ್ ಗ್ರಾಮ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಈ ಒಂಬತ್ತು ಶಾಲೆಗಳನ್ನು ತೆರೆದಿದ್ದಾರೆ. ಪ್ರಧಾನಿಯವರು ಅಲಿ ಬಗ್ಗೆ ಉಲ್ಲೇಖಿಸಿದಂದನಿಂದ ಬಾಂಗ್ಲಾದೇಶ ಗಡಿಯಲ್ಲಿರುವ ಈ ಗ್ರಾಮದಲ್ಲಿ ಸಂತೋಷದ ಅಲೆಯೆದ್ದಿದೆ. “ಅಹ್ಮದ್ ರವರ ಪ್ರಯತ್ನಗಳು ನಮ್ಮ ದೇಶವಾಸಿಗಳ ಆತ್ಮಬಲದ ಸಂಕೇತ” ಎಂದು ಪ್ರಧಾನಿ ಹೇಳಿದ್ದರು. ಪ್ರಧಾನಿಯ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ತಮ್ಮ ಪತ್ನಿ, ಮೂವರು ಪುತ್ರರು ಹಾಗೂ ಕೆಲ ಸಂಬಂಧಿಗಳೊಂದಿಗೆ ಕುಳಿತು ಕೇಳುತ್ತಿದ್ದ ಅಹ್ಮದ್ ಗೆ ಪ್ರಧಾನಿ ತಮ್ಮ ಹೆಸರು ಉಲ್ಲೇಖಿಸಿದ್ದನ್ನು ಕೇಳಿ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ತಾವು ಸ್ವತಃ ಶಿಕ್ಷಣವನ್ನು ಅರ್ಧದಲ್ಲಿಯೇ ತೊರೆದವರಾದರೂ ತಮ್ಮ ಊರಿನ ಮಕ್ಕಳು ವಿದ್ಯಾವಂತರಾಗಬೇಕೆಂಬ ಹಂಬಲದಿಂದ ಶಾಲೆಗಳನ್ನು ಆರಂಭಿಸಿರುವ ಅಹ್ಮದ್, ಸ್ಥಳೀಯರ ನೆರವಿನಿಂದ ಇಷ್ಟೆಲ್ಲ ಸಾಧ್ಯವಾಯಿತು ಎಂದಿದ್ದಾರೆ.
1978ರಲ್ಲಿ ತಮ್ಮ ಬಳಿಯಿದ್ದ ಒಂದು ತುಂಡು ಭೂಮಿಯನ್ನು ಮಾರಾಟ ಮಾಡಿ ಅದರಿಂದ ಬಂದ ಹಣ ಹಾಗೂ ಗ್ರಾಮಸ್ಥರಿಂದ ಸಂಗ್ರಹಿಸಿದ ಹಣದಿಂದ ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಿದ್ದರು. ಅವರ ಬಳಿ ಒಟ್ಟು 36 ಬಿಘಾ ಜಮೀನಿತ್ತು. ಪ್ರತಿ ಬಾರಿ ಶಾಲೆ ಆರಂಭಿಸುವಾಗಲೂ ಒಂದೊಂದು ತುಂಡು ಜಮೀನು ಮಾರಿದ್ದರು. ಹೀಗೆ 32 ಬಿಘಾ ಜಮೀನು ಮಾರಿ ಅವರು ಮೂರು ಕಿರಿಯ ಪ್ರಾಥಮಿಕ ಶಾಲೆಗಳು, ಐದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಒಂದು ಹೈಸ್ಕೂಲನ್ನು ಮಧುರ್ ಬಂದ್ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಆರಂಭಿಸಿದ್ದರು.
ಒಟ್ಟು ಹತ್ತು ಶಾಲೆಗಳನ್ನು ಹಾಗೂ ಒಂದು ಜೂನಿಯರ್ ಕಾಲೇಜನ್ನು ತೆರೆಯಬೇಕೆಂಬುದು ಅವರ ಕನಸಾಗಿದೆ. ಬಡ ಕುಟುಂಬಗಳ ಮಕ್ಕಳು ಶಾಲೆಯನ್ನು ಅರ್ಧದಲ್ಲಿಯೇ ತೊರೆಯುವಂತಾಗಬಾದೆಂಬುದು ಅವರ ಇಚ್ಛೆ. ಅವರು ಆರಂಭಿಸಿದ ಒಂಬತ್ತು ಶಾಲೆಗಳ ಪೈಕಿ ಒಂದು ಶಾಲೆಗೆ ಮಾತ್ರ ಅವರ ಹೆಸರನ್ನಿಡಲಾಗಿದೆ. ಗ್ರಾಮಸ್ಥರ ಸತತ ಒತ್ತಾಯದ ನಂತರ ತಮ್ಮ ಹೆಸರನ್ನು ಶಾಲೆಯೊಂದಕ್ಕೆ ಇಡಲು ಅವರು ಒಪ್ಪಿದ್ದರು.







