ಕಲೆ ಬದುಕನ್ನು ಬೆಳಗುತ್ತದೆ: ಚಂದ್ರಶೇಖರ ಕೆದ್ಲಾಯ

ಉಡುಪಿ, ಆ.6: ದೀಪ ಜಗತ್ತನ್ನು ಬೆಳಗಿದರೆ ಕಲೆ ಬದುಕನ್ನು ಬೆಳಗುತ್ತದೆ. ಎಲ್ಲಾ ರಂಗ ಕಲೆಗಳ ಮೂಲ ಸಂಗೀತ. ಯಕ್ಷಗಾನ, ಭರತನಾಟ್ಯ, ಜನಪದ, ಸುಗಮ ಸಂಗೀತ ಈ ಎಲ್ಲಾ ಸಾಂಸ್ಕತಿಕ ಪ್ರಾಕಾರಗಳಿಗೂ ಸಂಗೀತವೇ ಪ್ರಧಾನ. ಹಾಡುವ ಶೈಲಿಯಲ್ಲಿ ಮಾತ್ರ ವ್ಯತ್ಯಾಸ ಎಂದು ಗಾಯಕ ಕಲಾವಿದ ಚಂದ್ರ ಶೇಖರ ಕೆದ್ಲಾಯ ಅಭಿಪ್ರಾಯ ಪಟ್ಟಿದ್ದಾರೆ.
ಕುಂಜಾಲು ಯಕ್ಷಸಮೂಹ ಯಕ್ಷಗಾನ ಕಲಾಪ್ರತಿಷ್ಠಾನದ ದಶಮಾನೋತ್ಸವ ಸಮೂಹ ಸಡಗರ ಸರಣಿಯ ದ್ವಿತೀಯ ಕಾರ್ಯಕ್ರಮ ‘ಗಾನತರಂಗ’ ಶಾಸ್ತ್ರೀಯ ಸಂಗೀತ ಪ್ರಸುತ್ತಿಯನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ತ್ರಿಕಣ್ಣೇಶ್ವರಿ ಮಾಸ ಪತ್ರಿಕೆ ಪ್ರಕಾಶಕ ತೇಜೇಶ್ವರ ರಾವ್, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಮುಖ್ಯ ಅತಿಥಿಗಳಾಗಿದ್ದರು. ಗೌರವಾಧ್ಯಕ್ಷ ಕೆ.ವ್ಯೆ.ಶ್ರೀನಿವಾಸ ಬಾಸ್ರಿ, ಸಂಚಾಲಕ ಕೆ.ಎಸ್.ವಿಷ್ಣುಮೂರ್ತಿ ಬಾಸ್ರಿ ಉಪಸ್ಥಿತರಿದ್ದರು.
ದಶಮಾನ ಸಮಿತಿಯ ಮಾರ್ಗದರ್ಶಕ ಪ್ರೊ.ಎಸ್.ವಿ.ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನ ಅಧ್ಯಕ್ಷ ಕೆ.ಎಸ್.ಸುಬ್ರಹ್ಮಣ್ಯ ಬಾಸ್ರಿ ಸ್ವಾಗತಿಸಿದರು. ಕೆ.ಎಸ್.ಶ್ರವಣ್ ಬಾಸ್ರಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸರ್ಪು ಸದಾನಂದ ಪಾಟೀಲ್ ವಂದಿಸಿದರು. ಬಳಿಕ ಉಡುಪಿ ಶ್ರಾವ್ಯಾ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಜರಗಿತು.







