ಮೋದಿ ಸರಕಾರ ದಲಿತರ ಹಿತ ಕಾಪಾಡಲಿ: ಮಾವಳ್ಳಿ ಶಂಕರ್
ದಲಿತ ಹಕ್ಕುಗಳ ರಕ್ಷಣಾ ಮಹಾ ಮೆರವಣಿಗೆ
ಬೆಂಗಳೂರು, ಆ.6: ದಲಿತ ಸಮುದಾಯವನ್ನು ಗುರಿಯಾಗಿಸಿಕೊಂಡು ದೇಶದೆಲ್ಲೆಡೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಸಂವಿಧಾನ ದುರ್ಬಲಗೊಳಿಸುವ ಸಂಚಿನ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಮಿತಿ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಯಿತು.
ಸೋಮವಾರ ನಗರದ ಪುರಭವನದ ಎದುರು ಜಮಾಯಿಸಿದ ಸಾವಿರಾರು ಮಂದಿ ದಲಿತ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಕೇಂದ್ರ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಘೋಷಣೆ ಕೂಗುತ್ತ ಫ್ರೀಡಂಪಾರ್ಕ್‌ವರೆಗೂ ಮೆರವಣಿಗೆ ನಡೆಸಿದರು.
ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರ ದಲಿತರ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕು. ಜೊತೆಗೆ ಸಂವಿಧಾನ ದುರ್ಬಲಗೊಳಿಸುವ ಸಂಚು ಬಿಡಬೇಕು ಎಂದು ಹೇಳಿದರು.
ಎಸ್ಸಿ-ಎಸ್ಟಿ ಸಮುದಾಯದ ನೌಕರರ ಭಡ್ತಿ ಮೀಸಲಾತಿ ಸಂಬಂಧ ರಾಷ್ಟ್ರಪತಿ ಅಂಕಿತ ಹಾಕಿರುವ ಕಾಯ್ದೆಯನ್ನು ಜಾರಿ ಮಾಡಲು ಕರ್ನಾಟಕ ಸರಕಾರ ಮೀನಮೇಷ ಎಣಿಸುತ್ತಿದೆ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿರುವುದನ್ನು ನೆಪವಾಗಿಸಿಕೊಂಡು ಹಿಂಭಡ್ತಿ ಸಮರ್ಥಿಸಿಕೊಳ್ಳಲು ಮುಂದಾಗಿರುವ ಕ್ರಮ ಖಂಡನೀಯ ಎಂದರು.
ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸಂವಿಧಾನದ 177 ನೆ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಅದನ್ನು ಲೋಕಸಭೆಯಲ್ಲಿ ಮಂಡಿಸಿ, ಅನುಮೋದನೆ ನೀಡಬೇಕು ಎಂದ ಅವರು, ದಲಿತರ ರಕ್ಷಣೆಗಾಗಿ ರೂಪಿಸಿದ್ದ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನ ಸುಪ್ರೀಂ ಕೋರ್ಟ್ ತೀರ್ಪು ನೀಡುವ ಮೂಲಕ ದುರ್ಬಲಗೊಳಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸರಕಾರ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸಿ ಕಾನೂನು ತಿದ್ದುಪಡಿ ಮಾಡಿದೆ. ಆದರೆ, ದಲಿತರ ಮೇಲಿನ ದೌರ್ಜನ್ಯ ತಡೆಗೆ ಇರುವ ಕಾನೂನಿಗೆ ತಿದ್ದುಪಡಿ ಮಾಡಲು ಮುಂದಾಗುತ್ತಿಲ್ಲ ಎಂದು ಮಾವಳ್ಳಿ ಶಂಕರ್ ಹೇಳಿದರು.
ಹಕ್ಕೊತ್ತಾಯ: ರಾಷ್ಟ್ರಮಟ್ಟದಲ್ಲಿ ಕೇಂದ್ರ ಸರಕಾರ ಎಸ್ಸಿ-ಎಸ್ಟಿ, ಅರಣ್ಯವಾಸಿಗಳ ವಿಶೇಷ ಘಟಕ ಯೋಜನೆ ಕಾಯ್ದೆ ರೂಪಿಸಿ, ಜನಸಂಖ್ಯೆಗೆ ಅನುಗುಣವಾಗಿ ಹಣ ಕಾಯ್ದಿರಿಸಬೇಕು. ಕರ್ನಾಟಕ ಶಾಶ್ವತ ಹಿಂದುಳಿದ ಜಾತಿಗಳ ಆಯೋಗದ ಸಮೀಕ್ಷೆ ವರದಿಯನ್ನು ಸರಕಾರ ಅಂಗೀಕರಿಸಿ, ಜಾರಿ ಮಾಡಬೇಕು. ನಿವೇಶನ ರಹಿತ ಬಡವರಿಗೆ ಮನೆ ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ನಿಗದಿಗೊಳಿಸಬೇಕು. ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.
ಸರಕಾರದ ಎಲ್ಲ ಇಲಾಖೆಗಳಲ್ಲಿ ಹೊರಗುತ್ತಿಗೆ ನಿಷೇಧಿಸಬೇಕು ಅಥವಾ ರೋಸ್ಟರ್ ಪದ್ಧತಿ ಅಳವಡಿಸಬೇಕು. ಉನ್ನತ ಶಿಕ್ಷಣ ಖಾಸಗೀಕರಣ ನಿಲ್ಲಿಸಬೇಕು. ಎಲ್ಲ ಹಂತದಲ್ಲಿ ಉಚಿತ ಶಿಕ್ಷಣ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಒತ್ತಾಯಿಸಿದರು.
ಬಹಿರಂಗ ಸಭೆ: ಮೆರವಣಿಗೆ ಬಳಿಕ ಫ್ರೀಡಂಪಾರ್ಕ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಿತು. ಜೆಎನ್‌ಯು ಅಧ್ಯಕ್ಷ ಡಾ.ರಾಹುಲ್ ಸೋನ್ ಪಿಂಪ್ಲೆ, ಪತ್ರಕರ್ತ ಇಂದೂಧರ ಹೊನ್ನಾಪುರ, ಸಿಪಿಐ ಹಿರಿಯ ಮುಖಂಡ ಸಿದ್ದನಗೌಡ ಪಾಟೀಲ್, ಇಂದಿರಾ ಕೃಷ್ಣಪ್ಪ, ಲಕ್ಷ್ಮೀನಾರಾಯಣ ನಾಗವಾರ, ಗುರುಪ್ರಸಾದ್ ಕೆರಗೋಡು, ಎನ್.ಮುನಿಸ್ವಾಮಿ ಹಾಗೂ ಸಿದ್ದಾಪುರ ಮಂಜುನಾಥ್ ಸೇರಿ ಪ್ರಮುಖರು ಪಾಲ್ಗೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದಲಿತ ರಕ್ಷಣೆಗೆ ಬದ್ಧವಾಗಬೇಕು. ಜೊತೆಗೆ ಕ್ಷುಲ್ಲಕ ಕಾರಣಕ್ಕೆ ನಡೆಯುವ ಕೃತ್ಯಗಳಿಗೆ ಕಡಿವಾಣ ಹಾಕಬೇಕು
-ಡಾ.ರಾಹುಲ್ ಸೋನ್ ಪಿಂಪ್ಲೆ, ಜೆಎನ್‌ಯು ಅಧ್ಯಕ್ಷ







