ಕಲೆ, ಸಂಗೀತವಿಲ್ಲದೆ ಸಮಾಜದಲ್ಲಿ ನರಕ ಸೃಷ್ಟಿ: ಫಯಾಜ್ ಖಾನ್

ಬೆಂಗಳೂರು, ಆ.6: ಕಲೆ, ಸಂಗೀತಗಳಿಲ್ಲದಿದ್ದರೆ ಸಮಾಜವು ನರಕದ ರೀತಿಯಲ್ಲಿ ಪರಿವರ್ತನೆಯಾಗುತ್ತದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಫಯಾಜ್ ಖಾನ್ ಅಭಿಪ್ರಾಯಿಸಿದ್ದಾರೆ.
ಸೋಮವಾರ ನಗರದ ನಯನ ಸಭಾಂಗಣದಲ್ಲಿ ಕರ್ನಾಟಕ ಸಂಗೀತ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಪುಸ್ತಕಗಳ ಅನಾವರಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಗೀತ ಮತ್ತು ನೃತ್ಯ ಮನರಂಜನೆಗಷ್ಟೇ ಸೀಮಿತವಾದುದಲ್ಲ. ಅದೊಂದು ಸಂದೇಶ ಸಾರುವ ವೇದಿಕೆಯಾಗಿದೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ಸಂಗೀತ ಹಾಗೂ ಎಲ್ಲ ರೀತಿಯ ಕಲಾ ಪ್ರಕಾರಗಳು ಸಮೃದ್ಧಿಯಾಗಿವೆ. ಅದನ್ನು ಪ್ರತಿಯೊಬ್ಬರೂ ಉಪಯೋಗ ಮಾಡಿಕೊಳ್ಳಬೇಕು. ಅದರ ಸವಿಯನ್ನು ನೋಡಬೇಕು. ಅಲ್ಲದೆ, ಅದನ್ನು ಗೌರವಿಸಬೇಕು. ಆ ಮೂಲಕ ಕಲೆಗಳನ್ನು ಪ್ರೋತ್ಸಾಹಿಸಬೇಕು. ಜತೆಗೆ, ನಮ್ಮ ಕಲೆಗಳನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಅಕಾಡೆಮಿಯಿಂದ ಕಳೆದ ಎರಡು ವರ್ಷಗಳಿಂದ ಅನೇಕ ರಂಗದಲ್ಲಿ ಕೆಲಸ ಮಾಡಿರುವ ವಿದ್ವಾಂಸರು ಎಲ್ಲ ಸೇರಿ ಈ ಆರು ಸಂಪುಟಗಳ ಕೃತಿಗಳನ್ನು ರಚಿಸಿದ್ದಾರೆ. ಇವು ಕೇವಲ ಪಠ್ಯಗಳಿಗೆ ಸೀಮಿತವಾಗುವುದಲ್ಲ. ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವವರಿಗೆ ಮಾರ್ಗದರ್ಶಕ ಕೃತಿಗಳಾಗಿವೆ. ಸಂಗೀತ ಆಸಕ್ತರಿಗೆ, ಓದುಗರಿಗೆ ಈ ಕೃತಿಗಳಿಂದ ಅಪಾರವಾದ ಜ್ಞಾನ ಸಿಗುತ್ತದೆ ಎಂದು ಅವರು ವಿವರಿಸಿದರು.
ವಿಮರ್ಶಕ ಡಾ.ಎಂ.ಸೂರ್ಯ ಪ್ರಸಾದ ಮಾತನಾಡಿ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ ಹಾಗೂ ನೃತ್ಯ ಪ್ರಕಾರಗಳು ಸಮಾನವಾಗಿ ಬೆಳೆಯುತ್ತಿವೆ. ದೇಶ-ವಿದೇಶಗಳಲ್ಲಿ ಅಪಾರವಾದ ಗೌರವ, ಮನ್ನಣೆ ಪಡೆಯುತ್ತಿವೆ. ನಮ್ಮ ಸಂಗೀತಕ್ಕೆ ಗಟ್ಟಿತನವಿದೆ. ಗಟ್ಟಿತನವಿರುವ ಯಾವುದೇ ಕಲೆ ಎಲ್ಲವನ್ನೂ ಮೆಟ್ಟಿ ನಿಲ್ಲುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ನಾಗವಲ್ಲಿ ನಾಗರಾಜ್, ಆರ್.ಗಣೇಶ್, ವಸಂತ ಮಾಧವಿ, ಡಾ.ಡಿ.ಎ.ಉಪಾಧ್ಯ, ಡಾ.ಎಸ್.ಕಾರ್ತಿಕ್ ಸೇರಿದಂತೆ ಹಲವರಿದ್ದರು. ಇದೇ ವೇಳೆ ರಾವಲ್ಲೀರಸಾಲ, ಸಂಗೀತ ಶಾಸ್ತ್ರಗ್ರಂಥ ಚಂದ್ರಿಕೆ, ಸಂಗೀತಶಾಸ್ತ್ರ ಮಂದಾನಿಕಿ(ಭಾಗ1 ಮತ್ತು 2), ತೌಲನಿಕ ಸಂಗೀತ ಸಮೀಕ್ಷೆ, ಕಲಾನ್ವೇಷಣೆ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.







