ಮಂಡ್ಯ: ಹಲ್ಲೆಯಿಂದ ಮನನೊಂದ ಯುವಕ ಆತ್ಮಹತ್ಯೆ
ಶಾಸಕ ಬೆಂಬಲಿಗರ ವಿರುದ್ಧ ಹಲ್ಲೆ ಆರೋಪ, ನಾಲ್ವರ ಬಂಧನ

ಮಂಡ್ಯ, ಆ.6: ಗುಂಪೊಂದರ ಹಲ್ಲೆಯಿಂದ ಮನನೊಂದ ಕಾಂಗ್ರೆಸ್ ಕಾರ್ಯಕರ್ತ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕು ಗೊಬ್ಬರಗಾಲ ಗ್ರಾಮದಲ್ಲಿ ರವಿವಾರ ತಡರಾತ್ರಿ ನಡೆದಿದೆ.
ಗ್ರಾಮದ ನಾಗೇಂದ್ರ(28) ಎಂಬ ಯುವಕನೇ ಆತ್ಮಹತ್ಯೆ ಮಾಡಿಕೊಂಡಿದ್ದು, ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರ ಹಲ್ಲೆಯಿಂದ ಮನನೊಂದು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಆರೋಪಿಸಲಾಗಿದೆ.
ಈ ಪ್ರಕರಣಕ್ಕೆ ರಾಜಕೀಯ ಥಳಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸರು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಭಾನುವಾರ ತಡರಾತ್ರಿ ಬಾರೊಂದರಲ್ಲಿ ಮದ್ಯ ಸೇವಿಸುತ್ತಿರುವಾಗ ಮೃತ ನಾಗೇಂದ್ರ ಮತ್ತು ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು, ಸ್ಥಳದಲ್ಲಿದ್ದವರು ಬಿಡಿಸಿ ಕಳುಹಿಸಿದರು ಎಂದು ತಿಳಿದು ಬಂದಿದೆ. ಆದರೆ, ತಡರಾತ್ರಿ ಶಾಸಕ ಬೆಂಬಲಿಗರ ಗುಂಪು ನಾಗೇಂದ್ರ ಅವರ ಊರಿಗೆ ತೆರಳಿ ಹಲ್ಲೆ ನಡೆಸಿದ್ದು, ಇದಾದ ನಂತರ ನಾಗೇಂದ್ರ ಮನನೊಂದು ಊರ ಹೊರಗಿನ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಮೃತ ನಾಗೇಂದ್ರ ಶವ ಪರೀಕ್ಷೆ ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ನಡೆಯಿತು. ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಅರಕೆರೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶವಾಗಾರಕ್ಕೆ ಮಾಜಿ ಶಾಸಕ ಭೇಟಿ:
ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಭೇಟಿ ಮೃತ ನಾಗೇಂದ್ರನ ದರ್ಶನ ಪಡೆದ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಹದಿನೈದು ವರ್ಷಗಳಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಕಳೆದ ಮೂರು ತಿಂಗಳಿಂದ ಇಂತಹ ಏಳು ಪ್ರಕರಣಗಳು ಕ್ಷೇತ್ರದಲ್ಲಿ ಜರುಗಿವೆ. ಹೀಗೆ ಮುಂದುವರಿದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ನಾಲ್ವರ ಬಂಧನ: ಎಸ್ಪಿ ರಾಧಿಕಾ
ಪ್ರಕರಣದಕ್ಕೆ ಸಂಬಂಧಿಸಿದಂತೆ 7 ಮಂದಿ ವಿರುದ್ಧ ಸೆಕ್ಷನ್ 306ರಡಿ ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಮೇಲ್ನೋಟಕ್ಕೆ ಎರಡು ಗುಂಪುಗಳ ನಡುವೆ ರಾಜಕೀಯ ವಿಷಯವಾಗಿ ಮಾತಿನ ಚಕಮಕಿ ನಡೆದಿದೆ. ಈ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ತಿಳಿಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾರ ತಿಳಿಸಿದ್ದಾರೆ.







