ಶಿವಮೊಗ್ಗ: ಕಾಂಗ್ರೆಸ್-ಜೆಡಿಎಸ್ ನಡುವೆ ಏರ್ಪಡಲಿದೆಯಾ ಮೈತ್ರಿ ?
ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಹತ್ತಿಕ್ಕುವ ಉದ್ದೇಶ

ಲೋಕಸಭೆ ಚುನಾವಣಾ ಹೊಂದಾಣಿಕೆಗೂ ನಡೆಯುತ್ತಿದೆ ಚರ್ಚೆ!
ಶಿವಮೊಗ್ಗ, ಆ.6: ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ಬಿಜೆಪಿ ಪ್ರಾಬಲ್ಯವಿರುವೆಡೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸುವ ಚಿಂತನೆ ನಡೆಸುತ್ತಿವೆ. ಈ ನಡುವೆ ಬಿಜೆಪಿ ಭದ್ರಕೋಟೆಯಾಗಿ ಪರಿವರ್ತಿತವಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿಯೂ, ದೋಸ್ತಿಗಳ ನಡುವೆ ‘ಮೈತ್ರಿ’ ಏರ್ಪಡುವ ಲಕ್ಷಣಗಳು ಗೋಚರವಾಗುತ್ತಿವೆ.
ಈ ಹೊಸ ಬೆಳವಣಿಗೆಯು ಸ್ಥಳೀಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ, ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಸಾಧನೆ ನಗಣ್ಯ. ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೇವಲ ಒಂದು ಕಡೆ ಜಯ ಸಾಧಿಸಿದ್ದರೆ, ಜೆಡಿಎಸ್ ಸಾಧನೆ ಶೂನ್ಯವಾಗಿದೆ. ಉಳಿದಂತೆ ಬಿಜೆಪಿಯು ಆರು ಕಡೆ ಜಯ ಸಾಧಿಸಿ ಪ್ರಾಬಲ್ಯ ಮೆರೆದಿದೆ. ಮಲೆನಾಡನ್ನು ಮತ್ತೆ ತನ್ನ ಭದ್ರಕೋಟೆಯಾಗಿ ಮಾರ್ಪಡಿಸಿಕೊಂಡಿದೆ.
ಮತ್ತೊಂದೆಡೆ ಚುನಾವಣಾ ಆಯೋಗವು ಜಿಲ್ಲೆಯ 9 ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪೂರ್ವಭಾವಿ ತಯಾರಿ ನಡೆಸಲಾರಂಭಿಸಿದೆ. ಈ ಚುನಾವಣೆಯಲ್ಲಿಯೂ ಪ್ರಾಬಲ್ಯ ಮೆರೆಯಲು ಈಗಾಗಲೇ ಬಿಜೆಪಿ ಕಾರ್ಯತಂತ್ರ ರೂಪಿಸಲಾರಂಭಿಸಿದೆ. ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು, ಜಿಲ್ಲೆಯ ಅತ್ಯಧಿಕ ಕ್ಷೇತ್ರಗಳಲ್ಲಿ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಬೇಕು ಎಂದು ಸ್ವತಃ ಆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಫರ್ಮಾನು ಹೊರಡಿಸಿದ್ದಾರೆ.
ಮತ್ತೊಂದೆಡೆ ಬಿಜೆಪಿಯ ಚುನಾವಣಾ ಸಿದ್ಧತೆಗೆ ಹೋಲಿಸಿದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಇನ್ನಷ್ಟೇ ಟೇಕಾಫ್ ಆಗಬೇಕಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಬಿಜೆಪಿಯನ್ನು ಅಷ್ಟು ಸುಲಭವಾಗಿ ಕಟ್ಟಿ ಹಾಕಲು ಸಾಧ್ಯವಿಲ್ಲ ಎಂಬುವುದರ ಮನವರಿಕೆಯೂ ಎರಡೂ ಪಕ್ಷದ ವರಿಷ್ಠರಿಗೂ ತಿಳಿದಿದೆ. ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಮತ ವಿಭಜನೆಯ ಲಾಭದಿಂದ ಬಿಜೆಪಿಗೆ ಹೆಚ್ಚು ಅನುಕೂಲಕರವಾಗುವ ಸಾಧ್ಯತೆಗಳಿವೆ. ಈ ಎಲ್ಲ ಮಾಹಿತಿ ಸಂಗ್ರಹಿಸಿರುವ ಕಾಂಗ್ರೆಸ್-ಜೆಡಿಎಸ್ ವರಿಷ್ಠರು, ಶಿವಮೊಗ್ಗ ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಗಂಭೀರ ಚಿಂತನೆ ನಡೆಸುತ್ತಿವೆ ಎಂದು ಉನ್ನತ ಮೂಲಗಳು ಹೇಳುತ್ತಿವೆ. ಆದರೆ ಈ ಕುರಿತಂತೆ ಇಲ್ಲಿಯವರೆಗೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲವೆಂಬ ಮಾಹಿತಿಯೂ ಕೇಳಿಬರುತ್ತಿದೆ.
ಪೂರಕ ವಾತಾವರಣವಿಲ್ಲ: ರಾಜ್ಯದಲ್ಲಿ ‘ದೋಸ್ತಿ’ ಸರಕಾರವಿದ್ದರೂ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಚುನಾವಣೆಯಲ್ಲಿ ಅನುಕೂಲಕರವಾದ ವಾತಾವರಣ ಕಂಡುಬರುತ್ತಿಲ್ಲ. ಸಚಿವ ಸಂಪುಟ ಸೇರಿದಂತೆ ಸರಕಾರದ ಮಹತ್ವದ ಹುದ್ದೆಗಳಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲದಿರುವುದು, ಜಿಲ್ಲೆಯ ಹತ್ತು ಹಲವು ಅಭಿವೃದ್ಧಿ ಯೋಜನೆಗಳಿಗೆ ಸರಕಾರದಿಂದ ಸೂಕ್ತ ಅನುದಾನ ಬಿಡುಗಡೆಯಾಗದಿರುವುದು, ಇತ್ತೀಚೆಗೆ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ಆದ್ಯತೆ ದೊರಕದಿರುವುದು ಎರಡು ಪಕ್ಷಗಳ ಮುಖಂಡರಿಗೂ ದೊಡ್ಡ ತಲೆನೋವಾಗಿ ಪರಿಣಮಿಸುವಂತೆ ಮಾಡಿದೆ. ಹಾಗೆಯೇ ಎರಡೂ ಪಕ್ಷಗಳ ಸಂಘಟನೆಯಲ್ಲಿಯೂ ಹಲವು ಗೊಂದಲಗಳು ಮನೆ ಮಾಡಿವೆ. ಈ ಗೊಂದಲ ಪರಿಹಾರಕ್ಕೆ ಎರಡೂ ಪಕ್ಷದ ವರಿಷ್ಠರು ಗಮನಹರಿಸಿಲ್ಲ. ಇದೀಗ ಏಕಾಏಕಿ ವರಿಷ್ಠರ ಹಂತದಲ್ಲಿ ಮೈತ್ರಿ ಮಾತುಕತೆಗಳು ನಡೆಯಲಾರಂಭಿಸಿರುವುದು, ಸ್ಥಳೀಯ ಮುಖಂಡರಲ್ಲಿ ಗೊಂದಲ ಉಂಟು ಮಾಡಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವುದು ಅಷ್ಟು ಸುಲಭವಲ್ಲ ಎಂಬುದರ ಮಾಹಿತಿ ಕಾಂಗ್ರೆಸ್-ಜೆಡಿಎಸ್ ಪಕ್ಷದ ವರಿಷ್ಠರಿಗಿದೆ. ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸಿದರೆ ಬಿಜೆಪಿಗೆ ಪ್ರಬಲ ಪೈಪೋಟಿವೊಡ್ಡಬಹುದು ಎಂಬ ಚಿಂತನೆ ಎರಡೂ ಪಕ್ಷಗಳ ವರಿಷ್ಠರದ್ದಾಗಿದೆ. ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು, ಜಿಲ್ಲೆಯಲ್ಲಿ ನಡೆಯಲಿರುವ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ಮಾಡಿಕೊಳ್ಳುವ ಚಿಂತನೆ ವರಿಷ್ಠರದ್ದಾಗಿದೆ ಎನ್ನಲಾಗಿದೆ. ಸ್ಥಳೀಯ ನಾಯಕರ ಅಭಿಪ್ರಾಯ ಆಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿದ್ಧವಾಗುತ್ತಿದೆ ಅಭ್ಯರ್ಥಿಗಳ ಪಟ್ಟಿ
ಮುಂಬರುವ ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಲ್ಲಿ ಪೂರ್ವಭಾವಿ ಸಿದ್ದತೆಗಳನ್ನು ರಾಜಕೀಯ ಪಕ್ಷಗಳು ನಡೆಸಲಾರಂಭಿಸಿವೆ. ಬಿಜೆಪಿಯಿಂದ ಬಿ.ಎಸ್.ಯಡಿಯೂರಪ್ಪಪುತ್ರ ಬಿ.ವೈ.ರಾಘವೇಂದ್ರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಬ್ರಾಹ್ಮಣ ಕೋಟಾದಡಿ ಆ ಪಕ್ಷದ ಮುಖಂಡ ಎಸ್.ದತ್ತಾತ್ರಿ ಟಿಕೆಟ್‌ಗೆ ಲಾಬಿ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ರ ಹೆ ಸರುಗಳು ಕೇಳಿಬರುತ್ತಿವೆ. ಜೆಡಿಎಸ್‌ನಿಂದ ಗೀತಾ ಶಿವರಾಜ್‌ಕುಮಾರ್ ಅಥವಾ ಅವರ ಸಹೋದರ ಮಧು ಬಂಗಾರಪ್ಪರಲ್ಲಿ ಓರ್ವರು ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಪಕ್ಷಸಂಘಟನೆಗೆ ಪೆಟ್ಟುಬೀಳುವ ಆತಂಕ?
ಶಿವಮೊಗ್ಗ ಜಿಲ್ಲೆಯ ನಗರ ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ ಮಾತುಕತೆಗಳು ವರಿಷ್ಠರ ಹಂತದಲ್ಲಿ ನಡೆಯಲಾರಂಭಿಸಿದೆ ಎಂಬ ಚರ್ಚೆಗಳು ಜಿಲ್ಲೆಯ ಎರಡೂ ಪಕ್ಷಗಳ ಸ್ಥಳೀಯ ನಾಯಕರಲ್ಲಿ ಗೊಂದಲದ ಜೊತೆಗೆ ಅಚ್ಚರಿಯ ಭಾವ ಉಂಟು ಮಾಡಿದೆ. ಜಿಲ್ಲೆಯಲ್ಲಿ ಮೈತ್ರಿಯ ಯಾವುದೇ ಪ್ರಸ್ತಾವಗಳು ಇಲ್ಲ. ಇದು ಪಕ್ಷದ ಬೆಳವಣಿಗೆಯ ದೃಷ್ಟಿಯಿಂದ ಕಾರ್ಯಸಾಧುವೂ ಅಲ್ಲವೆಂದು ಎರಡೂ ಪಕ್ಷಗಳ ನಾಯಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ’ಮೈತ್ರಿಯಿಂದ ಮತ ವಿಭಜನೆ ತಪ್ಪಿಸಬಹುದು. ಆದರೆ ಇದರಿಂದ ಪಕ್ಷದ ಸಂಘಟನೆಯ ಮೇಲೆ ಭಾರೀ ಪರಿಣಾಮ ಬೀರಲಿದೆ. ಪಕ್ಷದ ಓಟ್ ಬ್ಯಾಂಕ್ ಕೂಡ ಛಿದ್ರವಾಗಲಿದೆ. ಇದರಿಂದ ಮೈತ್ರಿಯಿಂದ ಪಕ್ಷಕ್ಕಾಗುವ ಲಾಭಕ್ಕಿಂತ ಭವಿಷ್ಯದಲ್ಲಿ ನಷ್ಟವೇ ಹೆಚ್ಚು’ ಎಂದು ಹೆಸರೇಳಲಿಚ್ಛಿಸದ ಕಾಂಗ್ರೆಸ್‌ನ ಹಿರಿಯ ನಾಯಕರೋರ್ವರು ಅಭಿಪ್ರಾಯಪಡುತ್ತಾರೆ.







