ಬೆಂಗಳೂರು ನಂತರ ಶಿವಮೊಗ್ಗದಲ್ಲಿಯೂ ಶುರುವಾದ ಫ್ಲೆಕ್ಸ್ ತೆರವು ಕಾರ್ಯ
ಪಾಲಿಕೆ ಆಡಳಿತದಿಂದ ಕಾರ್ಯಾಚರಣೆ ಆರಂಭ
ಆ. 6: ಹೈಕೋರ್ಟ್ ಆದೇಶದ ನಂತರ ಬೆಂಗಳೂರು ಮಹಾನಗರದಲ್ಲಿ ಫ್ಲೆಕ್ಸ್ ಗಳ ಸಂಹಾರ ಕಾರ್ಯವನ್ನು ಅಲ್ಲಿನ ಬಿಬಿಎಂಪಿ ಆಡಳಿತ ಆರಂಭಿಸಿದೆ. ಇದೀಗ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಕೂಡ ನಗರಾದ್ಯಂತ ಬೇಕಾಬಿಟ್ಟಿಯಾಗಿ ಹಾಕಲಾಗಿದ್ದ ಫ್ಲೆಕ್ಸ್-ಬಂಟಿಂಗ್ಸ್ ತೆರವು ಕಾರ್ಯಾಚರಣೆ ಆರಂಭಿಸಿದೆ.
'ಇನ್ನು ಮುಂದೆ ನಗರದಲ್ಲಿ ಬೇಕಾಬಿಟ್ಟಿಯಾಗಿ, ಅನುಮತಿಯಿಲ್ಲದೆ ಫ್ಲೆಕ್ಸ್-ಬಂಟಿಂಗ್ಸ್ ಅಳವಡಿಸುವವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು. ಹಾಗೆಯೇ ಫ್ಲೆಕ್ಸ್ ಅಳವಡಿಕೆ ಮಾಡುವುದನ್ನು ಕೂಡ ಸಂಪೂರ್ಣ ನಿಷೇಧಿಸಲಾಗಿದೆ. ಈ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಆಡಳಿತ ಮಣಿಯುವುದಿಲ್ಲ ಎಂದು ಪಾಲಿಕೆ ಆಯುಕ್ತರಾದ ಟಿ.ವಿ.ಪ್ರಕಾಶ್‍ರವರು ಸ್ಪಷ್ಟಪಡಿಸಿದ್ದಾರೆ.
ಆದೇಶ: 30-3-2015 ರ ಸಾಮಾನ್ಯ ಸಭೆಯ ತೀರ್ಮಾನದಂತೆ ನಗರದಲ್ಲಿ ಫ್ಲೆಕ್ಸ್ ಅಳವಡಿಕೆ ನಿಷೇಧಿಸಲಾಗಿದೆ. ಆದಾಗ್ಯೂ ನಗರದ ಪ್ರಮುಖ ರಸ್ತೆಗಳಲ್ಲಿ ಫ್ಲೆಕ್ಸ್ ಗಳನ್ನು ಅಳವಡಿಸುವುದು, ಸಾರ್ವಜನಿಕ ಸೊತ್ತಾದ ಫುಟ್‍ಪಾತ್-ರಸ್ತೆ-ವೃತ್ತಗಳನ್ನು ಫ್ಲೆಕ್ಸ್ ಅಳವಡಿಕೆಗಾಗಿ ಹಾಳುಗೆಡವುತ್ತಿರುವುದು ಕಂಡುಬರುತ್ತಿದೆ. ಇದರಿಂದ ಜನ-ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ಈ ನಡುವೆ 26-7-2017 ರಂದು ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ 20 ಸ್ಥಳಗಳಲ್ಲಿ ಫ್ಲೆಕ್ಸ್ ಹಾಕಲು ಅವಕಾಶ ಕಲ್ಪಿಸಲಾಗಿದೆ. ಫ್ಲೆಕ್ಸ್ ಅಳವಡಿಕೆಗೂ ಮುನ್ನ ಪಾಲಿಕೆಯಿಂದ ಅನುಮತಿ ಪಡೆದು, ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಫ್ಲೆಕ್ಸ್ ಅಳವಡಿಸಬೇಕು ಎಂದು ಆಯುಕ್ತ ಟಿ.ವಿ.ಪ್ರಕಾಶ್‍ರವರು ತಿಳಿಸಿದ್ದಾರೆ.
ನಿಗದಿಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ಉಳಿದ ಸ್ಥಳಗಳಲ್ಲೆನಾದರೂ ಫ್ಲೆಕ್ಸ್ ಅಳವಡಿಸಿದರೆ ಅಂತಹವರ ವಿರುದ್ದ ಓಪನ್ ಪ್ಲೇಸ್ ಡಿಸ್ ಫಿಗರ್‍ಮೆಂಟ್ ಆ್ಯಕ್ಟ್ 1981 ರ ಪ್ರಕಾರ ಕೇಸ್ ದಾಖಲಿಸಲಾಗುವುದು. ಈ ಕಾಯ್ದೆಯಡಿ ಫ್ಲೆಕ್ಸ್ ಅಳವಡಿಸಿದ ವ್ಯಕ್ತಿ ಅಥವಾ ಸಂಘಸಂಸ್ಥೆಗಳಿಗೆ 6 ತಿಂಗಳುಗಳ ಕಾಲ ಜೈಲುವಾಸ ಅಥವಾ 1000 ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಫ್ಲೆಕ್ಸ್ ಅಳವಡಿಸಲು ನಿಗದಿಪಡಿಸಲಾಗಿರುವ ಸ್ಥಳಗಳ ವಿವರ: ಸರ್ಕಿಟ್‍ಹೌಸ್ ಎಡಭಾಗ, ಸರ್ಕಿಟ್‍ಹೌಸ್ ಎದುರು, ಎನ್.ಟಿ.ರಸ್ತೆ 100 ನೇ ಅಡ್ಡ ರಸ್ತೆಯ ಜಂಕ್ಷನ್ ಸ್ಮಶಾನ್ ಹತ್ತಿರ, ಆಲ್ಕೋಳ ಸರ್ಕಲ್, ಸಾಗರ ರಸ್ತೆಯ ಉದ್ದೇಶಿತ ಪಾರ್ಕ್ ಹತ್ತಿರ, ಬೆಕ್ಕಿನಕಲ್ಮಠ ಸರ್ಕಲ್‍ನ ಅರಮನೆ ಕಡೆಯ ರಸ್ತೆಯ ಪಾಲಿಕೆ ಜಾಗದಲ್ಲಿ, ಜ್ಯೂವೆಲ್‍ರಾಕ್ ಕ್ರಾಸ್ ಎದುರುಗಡೆ ಇರುವ ಗಾಂಧಿಪಾರ್ಕ್ ಕಡೆ, ಕುವೆಂಪು ರಂಗಮಂದಿರ ಮುಂಭಾಗದ ಗಾಂಧಿ ಪಾರ್ಕ್ ಎದುರುಗಡೆ, ಮಹಾನಗರ ಪಾಲಿಕೆ ಮುಂಭಾಗದ ಪಾರ್ಕ್ ಕಡೆ, ಅಂಬೇಡ್ಕರ್ ಭವನದ ಹತ್ತಿರದ ಅಕ್ಕಪಕ್ಕದ ಪಾರ್ಕ್ ಕಡೆ, ಉಷಾ ನರ್ಸಿಂಗ್ ಹೋಂನ ರವೀಂದ್ರ ನಗರಕ್ಕೆ ಹೋಗುವ ರಸ್ತೆ - ಗಣಪತಿ ದೇವಾಸ್ಥಾನ - ಶಾಲೆ ಮಧ್ಯದ ಜಾಗ,
ಲಕ್ಷ್ಮೀ ಟಾಕೀಸ್ ಬಳಿಯ ತುಂಗಾ ಚಾನಲ್ ಸರ್ವಿಸ್ ರಸ್ತೆ ಭಾಗದಲ್ಲಿ, ಫುಡ್‍ಕೋರ್ಟ್ ಮುಂಭಾಗದ ಪಾಲಿಕೆ ಖಾಲಿ ಜಾಗದಲ್ಲಿ, ಕುವೆಂಪು ರಸ್ತೆಯ ಬಿಜೆಪಿ ಕಚೇರಿ ಎಡಭಾಗದಲ್ಲಿ, ಬಿ.ಹೆಚ್.ರಸ್ತೆಯ ತುಂಗಾ ಸೇತುವೆಯ ಬಸ್ ನಿಲ್ದಾಣದ ಹತ್ತಿರ, ಮೀನಾಕ್ಷಿ ಭವನ ಕ್ರಾಸ್‍ನ ಬಾಪೂಜಿನಗರ ಕಡೆ ಹೋಗುವ ದಾರಿಯ ಶಾಲಾ ಕಾಂಪೌಂಡ್ ಕಡೆಗೆ, ಡಿವಿಎಸ್ ಸರ್ಕಲ್‍ನಿಂದ ಕುವೆಂಪು ರಂಗಮಂದಿರ ಕಡೆಗೆ ಹೋಗುವ ದಾರಿಯಲ್ಲಿ ಪಾರ್ಕ್ ಕಾಂಪೌಂಡ್, ಕರ್ನಾಟಕ ಸಂಘದ ಸಿಗ್ನಲ್ ಲೈಟ್, ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಕುವೆಂಪು ರಸ್ತೆಯ ವಾಟರ್ ಟ್ಯಾಂಕ್ ಹತ್ತಿರ, ಆದಿಚುಂಚನಗಿರಿ ಶಾಲೆಯ ಮೈಕ್ರೋವೇವ್ ಸ್ಟೇಷನ್ ರೋಡ್‍ನ ಸ್ಮಶಾನದ ಹತ್ತಿರ, ರೈಲ್ವೆ ಸ್ಟೇಷನ್ ಹೋಗುವ ರಸ್ತೆಯ ಬಲಭಾಗದ ಕೆಇಬಿ ಕಚೇರಿ ಬಳಿಯ ಕೆಯುಡಬ್ಲ್ಯೂಎಸ್‍ಎಸ್‍ಬಿಡಿ ಕಚೇರಿ ಮುಂಭಾಗ.
ಒತ್ತಡಕ್ಕೆ ಮಣಿಯದಿರಲಿ : ನನ್ನ ಕನಸಿನ ಶಿವಮೊಗ್ಗ ಸಂಘಟನೆ ಅಧ್ಯಕ್ಷ ಎನ್.ಗೋಪಿನಾಥ್
'ಶಿವಮೊಗ್ಗ ನಗರದ ಜನನಿಬಿಡ, ವಾಹನ ಸಂಚಾರ ದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಅವೈಜ್ಞಾನಿಕ - ಅಪಾಯಕಾರಿ ಸ್ಥಿತಿಯಲ್ಲಿ ಫ್ಲೆಕ್ಸ್-ಬಂಟಿಂಗ್ಸ್ ಅಳವಡಿಸುವುದು ಎಗ್ಗಿಲ್ಲದೆ ನಡೆದುಕೊಂಡು ಬರುತ್ತಿದೆ. ಹೇಳುವವರು ಕೇಳುವವರ್ಯಾರು ಇಲ್ಲದಂತಹ ಸ್ಥಿತಿಯಿದೆ. ಇದೀಗ ಪಾಲಿಕೆ ಆಡಳಿತವು ಇಂತಹ ಫ್ಲೆಕ್ಸ್‍ಗಳ ತೆರವಿಗೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ. ಪಾಲಿಕೆಯ ಈ ಕ್ರಮ ನಿರಂತರವಾಗಿರಬೇಕು. ಯಾವುದೇ ಕಾರಣಕ್ಕೂ ಪಾಲಿಕೆ ನಿಗದಿಪಡಿಸಿದ ಪ್ರದೇಶ ಹೊರತುಪಡಿಸಿ, ಉಳಿದೆಡೆ ಫ್ಲೆಕ್ಸ್ ಗಳ ಅಳವಡಿಕೆಗೆ ಅವಕಾಶ ಕಲ್ಪಿಸಬಾರದು. ಈ ವಿಷಯದಲ್ಲಿ ಯಾವುದೇ ಒತ್ತಡಕ್ಕೂ ಮಣಿಯಬಾರದು' ಎಂದು ನನ್ನ ಕನಸಿನ ಶಿವಮೊಗ್ಗ ಸಂಘಟನೆಯ ಅಧ್ಯಕ್ಷ ಎನ್.ಗೋಪಿನಾಥ್ ಆಗ್ರಹಿಸಿದ್ದಾರೆ.