ಕೊಹ್ಲಿ ಭಾರತದ ಸಾರ್ವಕಾಲಿಕ ದಾಂಡಿಗ?

ಹೊಸದಿಲ್ಲಿ, ಆ.6: ಇಂಗ್ಲೆಂಡ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಆಟಗಾರರ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಕೊಹ್ಲಿ ಈ ವರೆಗೆ ನಂ.1 ಸ್ಥಾನ ಪಡೆದಿರುವ ಭಾರತದ 7ನೇ
ದಾಂಡಿಗ ಎನಿಸಿಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಗೌತಮ್ ಗಂಭೀರ್, ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ದಿಲೀಪ್ ವೆಂಗ್‌ಸರ್ಕಾರ್ ಈ ಹಿಂದೆ ನಂ.1 ಸ್ಥಾನ ಪಡೆದಿದ್ದರು.
ವಿರಾಟ್ ಕೊಹ್ಲಿ 934 ಪಾಯಿಂಟ್ಸ್ ಪಡೆದು ನಂ.1 ಸ್ಥಾನ ಪಡೆದಿದ್ದಾರೆ.
ಮ್ಯಾಥ್ಯೂ ಹೇಡನ್ , ಜಾಕ್ ಕಾಲಿಸ್ ಮತ್ತು ಎಬಿ ಡಿವಿಲಿಯರ್ಸ್ ತಲಾ 935 ಪಾಯಿಂಟ್ಸ್ ಗಳೊಂದಿಗೆ ನಂ.1 ಸ್ಥಾನ ಗಳಿಸಿದ್ದರು. ಡೊನಾಲ್ಡ್ ಬ್ರಾಡ್ಮನ್(961) ಮತ್ತು ಸ್ಟೀವ್ ಸ್ಮಿತ್(947) ಈ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ ದ್ದರು. ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ನಂ.1 ದಾಂಡಿಗ. ಟ್ವೆಂಟಿ-20ಯಲ್ಲಿ 671 ಅಂಕಗಳೊಂದಿಗೆ 12ನೇ ಸ್ಥಾನ ಗಳಿಸಿದ್ದಾರೆ. ಆಸ್ಟ್ರೇಲಿಯದ ಆ್ಯರೊನ್ ಫಿಂಚ್(891) ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಔಟಾಗದೆ 149 ರನ್ ಮತ್ತು ಎರಡನೇ ಇನಿಂಗ್ಸ್ ನಲ್ಲಿ 51 ರನ್ ಗಳಿಸಿದ್ದರು. ಭಾರತ ಈ ಟೆಸ್ಟ್‌ನಲ್ಲಿ 31 ರನ್‌ಗಳ ಸೋಲು ಅನುಭವಿಸಿತ್ತು. ಕೊಹ್ಲಿ ಈ ಟೆಸ್ಟ್‌ನಲ್ಲಿ ದಾಖಲಿಸಿದ 200 ರನ್‌ಗಳು ನಂ.1 ಸ್ಥಾನಕ್ಕೇರಲು ನೆರವಾಗಿತ್ತು. ಸ್ಟೀವ್ ಸ್ಮಿತ್ 32 ತಿಂಗಳುಗಳಿಂದ ನಂ.1 ಸ್ಥಾನದಲ್ಲಿದ್ದರು. ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ. ಸ್ಮಿತ್ (929) ಅವರಿಗಿಂತ ಕೊಹ್ಲಿ 5 ಪಾಯಿಂಟ್ಸ್ ಮುಂದೆ ಇದ್ದಾರೆ. ಈ ಸ್ಥಾನ ಉಳಿಸಿಕೊಳ್ಳಬೇಕಾದರೆ ಕೊಹ್ಲಿ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಬೇಕಾಗಿದೆ.
ಕೊಹ್ಲಿ ಮೊದಲ 67 ಟೆಸ್ಟ್‌ಗಳಲ್ಲಿ 54.28 ಸರಾಸರಿಯಂತೆ 5,754 ರನ್ ದಾಖಲಿಸಿದ್ದಾರೆ. 22 ಶತಕಗಳನ್ನು ಪೂರೈಸಿದ್ದಾರೆ.







