ದಾವಣಗೆರೆ: ಸರಕಾರಿ ಕಚೇರಿಯಲ್ಲಿ ಗುಂಡು ತುಂಡಿನ ಪಾರ್ಟಿ
ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕರಿಂದ ಸ್ಪಷ್ಟೀಕರಣ

ದಾವಣಗೆರೆ, ಆ.6: ನಗರದ ಕೋರ್ಟ್ ಪಕ್ಕದ ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರ ಕಚೇರಿಯಲ್ಲಿ ರವಿವಾರ ಅಧಿಕಾರಿಗಳು ಗುಂಡು ತುಂಡಿನ ಪಾರ್ಟಿ ನಡೆಸಿರುವ ಘಟನೆ ನಡೆದಿದೆ.
ಉಪ ನಿರ್ದೇಶಕರ ಕಚೇರಿಯಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಇದರಲ್ಲಿ ಡಿಸಿಸಿ ಬ್ಯಾಂಕ್‌ನ ಕೆಲ ಅಧಿಕಾರಿಗಳು, ಆಹಾರ ಇಲಾಖೆ ಸಿಬ್ಬಂದಿ ಸೇರಿದಂತೆ ಖಾಸಗಿ ವ್ಯಕ್ತಿಗಳೂ ಸಹ ಪಾಲ್ಗೊಂಡಿದ್ದರು ಎನ್ನಲಾಗಿದೆ.
ರಾತ್ರಿ 11 ಗಂಟೆ ಸುಮಾರಿಗೆ ಸರಕಾರಿ ಕಚೇರಿಯಲ್ಲಿಯೇ ಎಲ್ಲರೂ ರವಿವಾರ ರಾತ್ರಿ ಭರ್ಜರಿ ಮದ್ಯ ಮತ್ತು ಮಾಂಸ ಸೇವಿಸುತ್ತಾ ಹರಟೆ ಹೊಡೆಯುತ್ತಿದ್ದರು. ಈ ವೇಳೆ ಸುದ್ದಿ ತಿಳಿದು ಮಾಧ್ಯಮದವರು ಸ್ಥಳಕ್ಕೆ ಹೋಗುತ್ತಿದ್ದಂತೆ, ಕ್ಯಾಮರಾಗಳನ್ನು ಕಂಡು ಒಬ್ಬೊಬ್ಬರೇ ಕುಡಿಯುತ್ತಿದ್ದ ಬಾಟಲಿಗಳನ್ನು ಮುಚ್ಚಿಟ್ಟುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಕೆಲ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಆಷಾಢವಾಗಿರುವುದರಿಂದ ಇಲ್ಲಿ ಅಧಿಕಾರಿಗಳು ಬಂದು ಗುಂಡು ತುಂಡು ಸೇವಿಸುತ್ತಾರೆ ಎನ್ನುವ ಹಾರಿಕೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಪಾರ್ಟಿಯ ಬಗ್ಗೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರು ಸ್ಪಷ್ಟೀಕರಣ ನೀಡಿದ್ದು, ಆ.5 ರಂದು ರಾತ್ರಿ ಈ ಕೂಟವು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಕರ ಕಚೇರಿಯಲ್ಲಿ ಜರುಗಿಲ್ಲ. ಅಲ್ಲದೆ, ಈ ಕಚೇರಿಯಲ್ಲಿ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಸಿಬ್ಬಂದಿ ಮತ್ತು ಜನತಾ ಬಝಾರ್ ಸಿಬ್ಬಂದಿ ಸೇರಿ ಬಾಡೂಟ ಕೂಟದಲ್ಲಿ ಪಾಲ್ಗೊಂಡಿಲ್ಲ ಎಂದು ತಿಳಿಸಿದ್ದಾರೆ.





