ಭಾರತದ ಅಂಡರ್ -20 ತಂಡಕ್ಕೆ ಐತಿಹಾಸಿಕ ಜಯ

ವೆಲೆನ್ಸಿಯಾ(ಸ್ಪೇನ್), ಆ.6: ಆರು ಬಾರಿಯ ಅಂಡರ್-20 ವಿಶ್ವ ಚಾಂಪಿಯನ್ ಅರ್ಜೆಂಟೀನವನ್ನು ಮಣಿಸಿದ ಭಾರತದ ಅಂಡರ್-20 ತಂಡ ಕೊಟಿಫ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಅತ್ಯಂತ ಸ್ಮರಣೀಯ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿದೆ.
10 ಆಟಗಾರರೊಂದಿಗೆ ಆಡಿದ ಹೊರತಾಗಿಯೂ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡ ಅರ್ಜೆಂಟೀನವನ್ನು 2-1 ಅಂತರದಿಂದ ಮಣಿಸಿದೆ. ತಲಾ ಒಂದು ಗೋಲು ಬಾರಿಸಿದ ದೀಪಕ್ ಟಾಂಗ್ರಿ (4ನೇ ನಿಮಿಷ) ಹಾಗೂ ಅನ್ವರ್ ಅಲಿ(68ನೇ ನಿಮಿಷ) ಭಾರತದ ಅಂಡರ್-20 ತಂಡದ ಹೀರೊಗಳಾಗಿ ಹೊರಹೊಮ್ಮಿದರು. ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 2006ರ ವಿಶ್ವಕಪ್ ತಂಡದ ಸದಸ್ಯ ಲಿಯೊನೆಲ್ ಸ್ಕಾಲೊನಿ ಅವರಿಂದ ಕೋಚಿಂಗ್ ಪಡೆದಿರುವ ಅರ್ಜೆಂಟೀನ 72ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿತು. ಫ್ಲೋಯ್ಡೋ ಪಿಂಟೋ ಕೋಚಿಂಗ್‌ನಲ್ಲಿ ಪಳಗಿರುವ ಭಾರತ ತಂಡ ಬಲಿಷ್ಠ ಅರ್ಜೆಂಟೀನವನ್ನು ಸೋಲಿಸಿ ಗಮನಾರ್ಹ ಸಾಧನೆ ಮಾಡಿದೆ. ಇದೇ ಟೂರ್ನಿಯಲ್ಲಿ ಮುರ್ಸಿಯಾ(0-2), ವೌರಿಟಾನಿಯಾ(0-3)ತಂಡದ ವಿರುದ್ಧ ಸೋಲುಂಡಿದ್ದ ಭಾರತ ತಂಡ ವೆನೆಜುವೆಲಾ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿತ್ತು.
‘‘ಈ ಗೆಲುವು ಖಂಡಿತವಾಗಿಯೂ ಭಾರತದ ಫುಟ್ಬಾಲ್‌ಗೆ ವಿಶ್ವಮಟ್ಟದಲ್ಲಿ ಗೌರವ ತಂದುಕೊಡಲಿದೆ. ಈ ಗೆಲುವಿನ ಮೂಲಕ ವಿಶ್ವ ಶ್ರೇಷ್ಠ ತಂಡದೊಂದಿಗೆ ಭಾರತಕ್ಕೆ ಆಡುವ ಅವಕಾಶ ತೆರೆದುಕೊಳ್ಳಲಿದೆ. ಈ ಗೆಲುವು ನಂಬಲಸಾಧ್ಯ ವಿಚಾರ. ಸರಿಯಾದ ಪ್ರೋತ್ಸಾಹ ಲಭಿಸಿದರೆ ವಿಶ್ವದ ಶ್ರೇಷ್ಠ ತಂಡವನ್ನು ಮಣಿಸಲು ನಮಗೆ ಸಾಧ್ಯವಿದೆ ಎಂದು ತೋರಿಸಿಕೊಟ್ಟಿದೇವೆ’’ ಎಂದು ಕೋಚ್ ಪಿಂಟೋ ಸಂಭ್ರಮ ವ್ಯಕ್ತಪಡಿಸಿದರು.
ಭಾರತದ ಗೋಲ್‌ಕೀಪರ್ ಪ್ರಭ್‌ಸುಖಾನ್ ಗಿಲ್ 56ನೇ ಹಾಗೂ 61ನೇ ನಿಮಿಷದಲ್ಲಿ ಎದುರಾಳಿ ತಂಡಕ್ಕೆ ಗೋಲು ನಿರಾಕರಿಸಿದರು. ಅವರ ಪ್ರಯತ್ನದಿಂದ ಭಾರತ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಗಿದೆ. 4ನೇ ನಿಮಿಷದಲ್ಲಿ ಗೋಲು ಬಾರಿಸಿದ ಭಾರತ ಉತ್ತಮ ಆರಂಭ ಪಡೆದಿತ್ತು. 68ನೇ ನಿಮಿಷದಲ್ಲಿ ಫ್ರೀಕಿಕ್‌ನಲ್ಲಿ ಗೋಲು ಬಾರಿಸಿದ ಅನ್ವರ್ ಅಲಿ ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. 54ನೇ ನಿಮಿಷದಲ್ಲಿ ಫಾರ್ವರ್ಡ್ ಆಟಗಾರ
ಅಂಕಿತ್ ಜಾಧವ್ ರೆಡ್ ಕಾರ್ಡ್ ಪಡೆದು ನಿರ್ಗಮಿಸಿದಾಗ ಭಾರತ 10 ಆಟಗಾರರೊಂದಿಗೆ ಆಡಬೇಕಾಯಿತು.
ಭಾರತೀಯ ಫುಟ್ಬಾಲ್ ಸಂಸ್ಥೆ(ಐಒಎ)ನಿರಾಕ್ಷೇಪಣಾ ಪತ್ರ ನೀಡದ ಕಾರಣ ಭಾರತ ಫುಟ್ಬಾಲ್ ತಂಡ ಮುಂಬರುವ ಏಶ್ಯನ್ ಗೇಮ್ಸ್ ನಲ್ಲಿ ಭಾಗವಹಿಸುವುದರಿಂದ ವಂಚಿತವಾಗಿದೆ. ಅಂಡರ್-17 ವಿಶ್ವಕಪ್‌ನಲ್ಲಿ ಭಾರತದ ಕಳಪೆ ಪ್ರದರ್ಶನವನ್ನು ಸೀನಿಯರ್ ಫುಟ್ಬಾಲ್ ತಂಡದ ಕೋಚ್ ಸ್ಟೀಫನ್ ಟೀಕಿಸಿದ ಒಂದು ವಾರದ ಬಳಿಕ ಅಪೂರ್ವ ಸಾಧನೆ ಮಾಡಿರುವ ಕಿರಿಯರ ತಂಡ ಟೀಕಾಕಾರರ ಬಾಯಿ ಮುಚ್ಚಿಸಿದೆ.







