ಓಬಿಸಿ ಆಯೋಗಕ್ಕೆ ಸಂವಿಧಾನ ಮಾನ್ಯತೆ ಸಂಸತ್ತಿನಿಂದ ಮಸೂದೆ ಅಂಗೀಕಾರ

ಹೊಸದಿಲ್ಲಿ, ಆ. 6: ಹಿಂದುಳಿದ ವರ್ಗಗಳ ಹಕ್ಕು ಹಾಗೂ ಹಿತಾಸಕ್ತಿಯ ರಕ್ಷಣೆಗೆ ಸಂಪೂರ್ಣ ಅಧಿಕಾರ ನೀಡುವ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಪ್ರಮುಖ ಮಸೂದೆಯನ್ನು ಸೋಮವಾರ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು.
ಜಾತಿ ಸಮೀಕ್ಷೆಯ ಸಂಶೋಧನೆಗಳನ್ನು ಬಹಿರಂಗಗೊಳಿಸುವಂತೆ ಹಾಗೂ ಮೀಸಲಾತಿಯನ್ನು ಅನುಷ್ಠಾನಗೊಳಿಸುವಂತೆ ಕೇಂದ್ರವನ್ನು ಹಲವು ಸದಸ್ಯರು ಆಗ್ರಹಿಸಿದ ಸಂದರ್ಭ ತೀವ್ರ ಚರ್ಚೆ ನಡೆದ ಬಳಿಕ ಸಾಂವಿಧಾನಿಕ (123ನೇ ತಿದ್ದುಪಡಿ) ಮಸೂದೆ 2017ನ್ನು ಅಂಗೀಕರಿಸಲಾಯಿತು. ಈ ಹಿಂದೆ ರಾಜ್ಯಸಭೆ ಕೈಗೊಂಡ ತಿದ್ದುಪಡಿಯನ್ನು ರದ್ದುಗೊಳಿಸಿದ ಲೋಕಸಭೆ ಆಗಸ್ಟ್ 2ರಂದು ಅನುಮೋದನೆ ನೀಡಿತ್ತು.
ಈ ಮಸೂದೆ ಅಂಗೀಕಾರಗೊಂಡಿರುವುದು ‘ಚಾರಿತ್ರಿಕ’ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಣ್ಣಿಸಿದ್ದಾರೆ.
‘‘ಇದು ನಮ್ಮ ದೇಶದ ಚಾರಿತ್ರಿಕ ಸನ್ನಿವೇಶ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಈ ಸಾಂವಿಧಾನಿಕ (123ನೇ ತಿದ್ದುಪಡಿ) ಮಸೂದೆಗೆ ಅಂಗೀಕಾರ ನೀಡಿದ ಸಂಸತ್ತನ್ನು ನಾನು ಅಭಿನಂದಿಸುತ್ತೇನೆ. ಇದು ಭಾರತದಾದ್ಯಂತದ ಹಿಂದುಳಿದ ವರ್ಗಗಳ ಸಮುದಾಯಗಳನ್ನು ಸಬಲೀಕರಿಸುವಲ್ಲಿ ಕೊಡುಗೆ ನೀಡಲಿದೆ’’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.







