ಆಟಿ ಆಚರಣೆಯಿಂದ ಆರೋಗ್ಯ ಜಾಗೃತಿ: ಭಾಸ್ಕರ ರೈ ಕುಕ್ಕುವಳ್ಳಿ
ಕಲ್ಬಾವಿ ಯೋಗ ಶಿಬಿರದಲ್ಲಿ ಆಟಿಡೊಂಜಿ ದಿನ, ಸಮ್ಮಾನ ಕಾರ್ಯಕ್ರಮ

ಮಂಗಳೂರು, ಆ. 7: 'ತುಳುವರ ಆಟಿ ತಿಂಗಳು ಕಡು ಬಡತನ ಮತ್ತು ರೋಗ ರುಜಿನಗಳ ಕಾಲವಾಗಿತ್ತು. ದವಸ ಧಾನ್ಯಗಳ ದಾಸ್ತಾನು ಮುಗಿದಿರುವ ಹೊತ್ತಿಗೆ ಕಾಡಿನಲ್ಲಿ ದೊರೆಯುವ ಗೆಡ್ಡೆ ಗೆಣಸು, ಸೊಪ್ಪು,ನಾರು-ಬೇರುಗಳೇ ಜನರ ಆಹಾರವಾಗಿತ್ತು. ಅದೇ ಅವರಿಗೆ ಪರೋಕ್ಷವಾಗಿ ರೋಗ ನೀರೋಧಕ ಔಷಧಿಯೂ ಆಗಿತ್ತು. ಇಂದು ಆ ದಿನಗಳನ್ನು ಸ್ಮರಿಸಿಕೊಳ್ಳುವ ಆಟಿ ಆಚರಣೆಯಿಂದ ಜನರಲ್ಲಿ ಆರೋಗ್ಯ ಜಾಗೃತಿ ಉಂಟಾಗುತ್ತಿರುವುದು ಗಮನಿಸಬೇಕಾದ ಅಂಶ' ಎಂದು ಕವಿ, ಲೇಖಕ ಹಾಗೂ ಜಾನಪದ ತಜ್ಞ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಪತಂಜಲಿ ಯೋಗ ಸಮಿತಿ ಮತ್ತು ಭಾರತ್ ಸ್ವಾಭಿಮಾನ್ ಟ್ರಸ್ಟ್ ಕಲ್ಬಾವಿ ಕೊಟ್ಟಾರ ಇದರ ಆಶ್ರಯದಲ್ಲಿ ಯೋಗಗುರು ಜಗದೀಶ್ ಶೆಟ್ಟಿ ಬಿಜೈ ನಡೆಸುವ 142ನೇ ಉಚಿತ ಯೋಗ ಶಿಬಿರದ ಅಂಗವಾಗಿ ಏರ್ಪಡಿಸಲಾದ 'ಆಟಿಡೊಂಜಿ ಕೂಟ'ದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. 'ಯೋಗ, ಆಯುರ್ವೇದ ಇತ್ಯಾದಿಗಳು ಪ್ರಕೃತಿಯೊಂದಿಗೆ ಮಾನವನ ಅನುಸಂಧಾನದಿಂದಾಗುವ ಭೌತಿಕ ಲಾಭಗಳನ್ನು ತಿಳಿಸುವುದರಿಂದ ಅವುಗಳ ಅನುಷ್ಠಾನದಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ' ಎಂದವರು ನುಡಿದರು, ದೋಹಾ ಕತಾರ್ ನ ಉದ್ಯಮಿ ಎಂ. ರವಿ ಶೆಟ್ಟಿ ತೆಂಗಿನ ಕೋಡು ಅರಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ಕವಿ ವಿ.ಗ.ನಾಯಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಮೇಯರ್ ಎಂ.ಶಶಿಧರ ಶೆಟ್ಟಿ, ಹೊಸದಿಗಂತ ಪತ್ರಿಕೆಯ ಸ್ಥಾನೀಯ ಸಂಪಾದಕ ಪ್ರಕಾಶ್ ಇಳಂತಿಲ, ವಿಜಯವಾಣಿಯ ಹಿರಿಯ ವರದಿಗಾರ ಪಿ.ಬಿ.ಹರೀಶ್ ರೈ, ಮಾಜಿ ಕಾರ್ಪೋರೇಟರ್ ರಂಗನಾಥ ಕಿಣಿ, ಪುಣೆಯ ಉದ್ಯಮಿ ಎಂ.ಸಚ್ಚಿದಾನಂದ ಶೆಟ್ಟಿ, ಚುಟುಕು ಕವಿ ಶೇಖರ ಬಂಡಾರಿ,ಮಾಜಿ ಸೈನಿಕ ಎನ್.ಟಿ.ಬೋಳಾರ್ ಮುಖ್ಯ ಅತಿಥಿಗಳಾಗಿದ್ದರು.
ಪತಂಜಲಿ ಯೋಗ ಸಮಿತಿಯ ಸುಬ್ರಾಯ ನಾಯಕ್ ಸ್ವಾಗತಿಸಿದರು. ಸುಧಾಕರ ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಯೋಗ ಶಿಕ್ಷಕಿಯರಾದ ಭಾರತಿ ಶೆಟ್ಟಿ, ರಾಧಿಕಾ ಕಾಮತ್,ಊರ್ಮಿಳಾ ಶೆಟ್ಟಿ,ಸುನೀತಾ,ಸುಚಿತ್ರಾ,ಶಖಿಲಾ,ಮಮತಾ ಸಹಕರಿಸಿದರು. ಬಳಿಕ ಆಟಿಯ ವಿಶೇಷ ತಿಂಡಿ ತಿನಿಸು ಗಳನ್ನು ಸಭಿಕರಿಗೆ ವಿತರಿಸಲಾಯಿತು.
ಬಿರುದಿನೊಂದಿಗೆ ಸನ್ಮಾನ
ಸಮಾರಂಭದಲ್ಲಿ ಶಿಕ್ಷಣ, ಸಂಸ್ಕೃತಿ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಮಾಡಿದ ಬಹುಮುಖೀ ಸಾಧನೆಗಾಗಿ ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ 'ಕರಾವಳಿಯ ಜ್ಞಾನ ಸೂರ್ಯ' ಬಿರುದು ನೀಡಿ ಸನ್ಮಾನಿಸಲಾಯಿತು. ಸ್ಮಿತಾ ಶೆಣೈ ಮಾನಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ಅನಿವಾಸಿ ಭಾರತೀಯ ಮೂಡಂಬೈಲ್ ರವಿ ಶೆಟ್ಟಿ ಮತ್ತು ಯೋಗ ಗುರು ಎಂ.ಜಗದೀಶ ಶಟ್ಟಿ ಬಿಜೈ ಅವರನ್ನು ಅಭಿನಂದಿಸಲಾಯಿತು.







