ಉಡುಪಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ
ಉಡುಪಿ, ಆ.7: ಇದೇ ತಿಂಗಳ 29ರಂದು ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉಡುಪಿ ನಗರಸಭೆ ಹಾಗೂ ಕಾರ್ಕಳ ಪುರಸಭಾ ಚುನಾವಣೆಗೆ ಜಾತ್ಯತೀತ ಜನತಾ ದಳ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಿದೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಉಡುಪಿ ನಗರಸಭೆಗೆ 8 ಹಾಗೂ ಕಾರ್ಕಳ ಪುರಸಭೆಗೆ ಐವರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದರು. ಇನ್ನುಳಿದ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದವರು ತಿಳಿಸಿದರು.
ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೂ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪ್ರಕಟಿಸಿದ ಯೋಗೀಶ್ ಶೆಟ್ಟಿ, ಕುಂದಾಪುರ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಎರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದರು.
ಉಡುಪಿ ನಗರಸಭೆಯ 8ವಾರ್ಡುಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಹೆಸರು ಹೀಗಿದೆ. ಮೂಡಬೆಟ್ಟು ವಾರ್ಡು: ರಮೇಶ್ ಶೆಟ್ಟಿ ಮೂಡಬೆಟ್ಟು, ಶಿರಿಬೀಡು: ಕೆ.ರಮೇಶ್ ಶೆಟ್ಟಿ ಆಶ್ರಯದಾತ, ಕರಂಬಳ್ಳಿ: ರೋಹಿತ್ ಕರಂಬಳ್ಳಿ, ಅಜ್ಜರಕಾಡು: ಅನಿತ ಶೆಟ್ಟಿ, ಕಸ್ತೂರ್‌ಬಾ ನಗರ: ಚಂದ್ರಕಲಾ ಚಿಟ್ಪಾಡಿ, ಇಂದಿರಾನಗರ: ಜಯಕರ ಪೂಜಾರಿ, ವಡಬಾಂಡೇಶ್ವರ: ಶಶಿಧರ ಎಂ.ಅಮೀನ್, ಗುಂಡಿಬೈಲು: ಆರೀಫ್ ಗುಂಡಿಬೈಲು.
ಕಾರ್ಕಳ ಪುರಸಭೆ: ಬಂಗ್ಲೆಗುಡ್ಡೆ ಕಜೆ: ನಾಸೀರ್ ಹುಸೇನ್, ಸಾಲ್ಮರ ಜರಿಗುಡ್ಡೆ: ಉಮೇಶ್ ಕಲ್ಲೂಟ್ಟೆ, ದಾನಶಾಲೆ: ಕೆ.ಪಿ.ಶಿವಾನಂದ, ತಾಲೂಕು ಕಚೇರಿ: ಮೊಹಮ್ಮದ್ ಜುಬೇರ್, ಕಾಬೆಟ್ಟು ರೋಟರಿ: ಸಚ್ಚಿನ್ ದೇವಾಡಿಗ.
ಅಭ್ಯರ್ಥಿಗಳು ಈಗಾಗಲೇ ಒಂದು ಸುತ್ತಿನ ಪ್ರಚಾರವನ್ನು ತಮ್ಮ ತಮ್ಮ ವಾರ್ಡುಗಳಲ್ಲಿ ನಡೆಸಿದ್ದು, ಉಳಿದ ಅಭ್ಯರ್ಥಿಗಳಿಗೂ ವಾರ್ಡುಗಳಿಗೆ ತೆರಳಿ ಜನರ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ. ಎಲ್ಲರಿಗೂ ನಿಷ್ಠೆಯಿಂದ ಜನರ ಸೇವೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ಉಡುಪಿ ನಗರಸಭೆಯಲ್ಲೀಗ ಅಧಿಕಾರಿಗಳ ದರ್ಪ ಹೆಚ್ಚಾಗಿದ್ದು, ಜನ ಸಾಮಾನ್ಯರ ಕುರಿತಂತೆ ಇವರು ನಿರ್ಲಕ್ಷದ ಧೋರಣೆ ಹೊಂದಿದ್ದಾರೆ. ಉಡುಪಿ ನಗರದಲ್ಲಿ ಒಳಚರಂಡಿ, ನೀರು ಪೂರೈಕೆ, ರಸ್ತೆ ಅವ್ಯವಸ್ಥೆ ತೀವ್ರವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಸಮರ್ಪಕ ಕೆಲಸಗಳು ನಡೆದಿಲ್ಲ ಎಂದು ಯೋಗೀಶ್ ಶೆಟ್ಟಿ ದೂರಿದರು.
ಜನರಿಗೆ ಹೊರೆಯಾಗಿರುವ ತೆರಿಗೆಯನ್ನು ಇಳಿಸಿ, ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಹಾಗೂ ಉಚಿತವಾಗಿ ನಡೆಸಲು ನಮ್ಮ ಪಕ್ಷ ಬದ್ಧವಾಗಿದೆ ಎಂದು ಯೋಗೀಶ್ ಶೆಟ್ಟಿ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಾಯಕರಾದ ವಾಸುದೇವ ರಾವ್, ಜಯಕರ ಪರ್ಕಳ, ದಕ್ಷತ್ ಶೆಟ್ಟಿ, ದಿಲ್ಲೇಶ ಶೆಟ್ಟಿ, ಪ್ರಕಾಶ್ ಶೆಟ್ಟಿ, ಸಚಿನ್, ರವಿರಾಜ್ ಸಾಲ್ಯಾನ್, ಪ್ರದೀಪ್ ಜಿ. ಉಪಸ್ಥಿತರಿದ್ದರು.







