ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ರಾಜ್ಯಕ್ಕೆ ಉಪಯೋಗವಾಗುವ ಕೆಲಸವಾಗಿಲ್ಲ: ದಿನೇಶ್ ಗುಂಡೂರಾವ್

ಬೆಂಗಳೂರು, ಆ.7: ರಾಜ್ಯದಿಂದ ಸಂಸದೆಯಾಗಿ ಆಯ್ಕೆಗೊಂಡಿರುವ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಉಪಯೋಗವಾಗುವಂತಹ ಯಾವೊಂದು ಕೆಲಸವನ್ನೂ ಮಾಡಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.
ಮಂಗಳವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಚಿವ ನಿರ್ಮಲಾ ಸೀತಾರಾಮ್ ರಾಜ್ಯದ ಹಿತಾಸಕ್ತಿಯನ್ನು ಕಾಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಅನುದಾನವು ಕಡಿತವಾಗುತ್ತಲೇ ಇದೆ ಎಂದು ಆರೋಪಿಸಿದರು.
ಬ್ಯಾಂಕ್ ಕ್ಷೇತ್ರದಲ್ಲಿ ಅನ್ಯಾಯ: ಕೇಂದ್ರದ ಬಿಜೆಪಿ ಸರಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು, ದಕ್ಷಿಣ ಭಾರತದ ಉದ್ಯೋಗಸ್ಥರಿಗೆ ಕೆಲಸ ಸಿಗದಂತೆ ಮಾಡಿದೆ. ಈ ಹಿಂದಿನ ನಿಯಮದ ಪ್ರಕಾರ ಬ್ಯಾಂಕ್‌ಗಳಲ್ಲಿ ಕೆಳಹಂತದ ಹುದ್ದೆಗಳಿಗೆ ಪ್ರಾದೇಶಿಕ ಭಾಷೆ ಕಡ್ಡಾಯಗೊಳಿಸಿತ್ತು. ಇದರಿಂದ ಕೆಳ ಹಂತದ ಬ್ಯಾಂಕಿಂಗ್ ಹುದ್ದೆಗಳು ಆಯಾ ರಾಜ್ಯದ ಉದ್ಯೋಗಸ್ಥರ ಪಾಲಾಗುತ್ತಿತ್ತು. ಈಗಿನ ಕೇಂದ್ರ ಸರಕಾರ ಪ್ರಾದೇಶಿಕ ಭಾಷೆಗಳ ಕಡ್ಡಾಯವನ್ನು ತೆಗೆದು ಹಾಕಿದೆ. ಹೀಗಾಗಿ ರಾಜ್ಯದಲ್ಲಿ ಕಳೆದ ಬಾರಿ ನಡೆದ 18 ಸಾವಿರ ಬ್ಯಾಂಕ್ ಹುದ್ದೆಗಳಲ್ಲಿ ಕೇವಲ 1060 ಹುದ್ದೆಗಳು ರಾಜ್ಯಕ್ಕೆ ಸಿಕ್ಕಿವೆ. ಉಳಿದ ಬಹುತೇಕ ಹುದ್ದೆಗಳು ಉತ್ತರ ಭಾರತದ ಪಾಲಾಗಿವೆ ಎಂದು ಅವರು ಹೇಳಿದರು.
ಏರ್ ಶೋ ತಪ್ಪುವಂತಾಗಿದೆ: ದೇಶದ ರಕ್ಷಣೆಗೆ ಸಂಬಂಧಿಸಿದ ಶಸ್ತ್ರಾಸ್ತ್ರ ಕಾರ್ಖಾನೆಗಳಿರುವುದು ಬೆಂಗಳೂರಿನಲ್ಲಿ. ಹೀಗಾಗಿ ಪ್ರತಿ ಬಾರಿಯು ಏರ್ ಶೋ ಬೆಂಗಳೂರಿನಲ್ಲೆ ನಡೆಯುತ್ತಿತ್ತು. ಇದರಿಂದ ದೇಶ, ವಿದೇಶದ ಕಂಪೆನಿಗಳ ಮಾಲಕರು ಬೆಂಗಳೂರಿಗೆ ಆಗಮಿಸಿ, ಬಹುಕೋಟಿ ರೂ. ಆರ್ಥಿಕ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ, ಈ ವರ್ಷ ಏರ್ ಶೋವನ್ನು ಬೆಂಗಳೂರಿನಲ್ಲಿ ನಡೆಸದಿರಲು ಕೇಂದ್ರ ಸರಕಾರ ತೀರ್ಮಾನಿಸಿದಂತಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರ ರಾಜ್ಯಕ್ಕೆ 14 ಹಾಗೂ 15ನೆ ಹಣಕಾಸು ಆಯೋಗದ ಮೂಲಕ ದಕ್ಷಿಣ ಭಾರತಕ್ಕೆ ಸಲ್ಲಬೇಕಾದ ಅನುದಾನದಲ್ಲಿ ಕಡಿತ ಮಾಡಿದೆ. ಆದರೂ ಬಿಜೆಪಿಯ ಸಂಸದರು ತಮ್ಮ ಸರಕಾರಕ್ಕೆ ತಂದು ಅನ್ಯಾಯವನ್ನು ಸರಿಪಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು.







