ಪ್ರಮಾಣವಚನಕ್ಕೂ ಮುನ್ನ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ಎದುರು ಹಾಜರಾಗುವ ಇಮ್ರಾನ್ ಖಾನ್

ಪೇಶಾವರ, ಆ. 7: ಸರಕಾರಿ ಹೆಲಿಕಾಪ್ಟರ್‌ಗಳನ್ನು ದುರ್ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿ, ಪಾಕಿಸ್ತಾನದ ಸಂಭಾವ್ಯ ನೂತನ ಪ್ರಧಾನಿ ಇಮ್ರಾನ್ ಖಾನ್ ದೇಶದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ಮುಂದೆ ಹಾಜರಾಗಲಿದ್ದಾರೆ.
ಹೆಲಿಕಾಪ್ಟರ್‌ಗಳ ದುರ್ಬಳಕೆ ಮೂಲಕ ಅವರು ಖೈಬರ್ ಪಖ್ತೂನ್‌ಖ್ವ ರಾಜ್ಯದ ಬೊಕ್ಕಸಕ್ಕೆ 21.7 ಲಕ್ಷ ರೂಪಾಯಿ (12.14 ಲಕ್ಷ ಭಾರತೀಯ ರೂಪಾಯಿ) ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತನ್ನೆದುರು ಹಾಜರಾಗುವಂತೆ ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ (ಎನ್‌ಎಬಿ) ಆಗಸ್ಟ್ 3ರಂದು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ 65 ವರ್ಷದ ಇಮ್ರಾನ್ ಖಾನ್‌ರಿಗೆ ಸಮನ್ಸ್ ನೀಡಿತ್ತು.
ಖೈಬರ್ ಪಖ್ತೂನ್‌ಖ್ವ ರಾಜ್ಯದಲ್ಲಿ ಇಮ್ರಾನ್‌ರ ಪಿಟಿಐ ಪಕ್ಷ 2013ರಿಂದ ಅಧಿಕಾರದಲ್ಲಿದೆ.
ರಾಜ್ಯ ಸರಕಾರದ ಹೆಲಿಕಾಪ್ಟರನ್ನು 72 ಗಂಟೆಗೂ ಅಧಿಕ ಕಾಲ ಬಳಸುವ ಮೂಲಕ ಇಮ್ರಾನ್ ಖಾನ್ ರಾಜ್ಯ ಸರಕಾರದ ಬೊಕ್ಕಸಕ್ಕೆ 21.7 ಲಕ್ಷ ಪಾಕಿಸ್ತಾನಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಅವರ ವಿರುದ್ಧ ಪ್ರಾಥಮಿಕ ವಿಚಾರಣೆ ನಡೆಸಲು ಎನ್‌ಎಬಿ ಮುಂದಾಗಿದೆ.
ಸರಕಾರಿ ಹೆಲಿಕಾಪ್ಟರನ್ನು ವೈಯಕ್ತಿಕ ಉದ್ದೇಶಕ್ಕಾಗಿ ಬಳಸುವಂತಿಲ್ಲ.
ಅದೇ ವೇಳೆ, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿರುವ ಇಮ್ರಾನ್, ತನ್ನ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ್ದಾರೆ.







