ಮೋದಿ ಸರಕಾರದಿಂದ ಬೇಸತ್ತಿರುವ ಜನತೆಗೆ ಪರ್ಯಾಯ ವ್ಯವಸ್ಥೆ ಬೇಕಿದೆ: ರಾಹುಲ್

ಹೊಸದಿಲ್ಲಿ, ಆ.7: ಭ್ರಷ್ಟಾಚಾರ, ಆರ್ಥಿಕ ವೈಫಲ್ಯ, ಅದಕ್ಷತೆ ಹಾಗೂ ಸಾಮಾಜಿಕ ವಿಭಜನೆಯ ಅನಿಷ್ಟಗಳು ನರೇಂದ್ರ ಮೋದಿಯವರ ಸರಕಾರದ ಅವಧಿಯಲ್ಲಿ ಗರಿಷ್ಟ ಮಿತಿಗೆ ತಲುಪಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜನತೆಗೆ ಒಂದು ಪರ್ಯಾಯ ಆಯ್ಕೆಯನ್ನು ಒದಗಿಸಬೇಕು ಎಂದು ಪಕ್ಷದ ಸಂಸದರಿಗೆ ಕರೆ ನೀಡಿದರು.
ಸಂಸತ್ ಭವನದಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರದ ಕಾರ್ಯವಿಧಾನದ ಬಗ್ಗೆ ಜನತೆಯಲ್ಲಿ ಅಸಮಾಧಾನದ ಭಾವನೆ ಹೆಚ್ಚುತ್ತಿದ್ದು ಪಕ್ಷದ ಸಂಸದರು ಮೋದಿಯವರ ‘ಅಚ್ಛೇದಿನ್’ ಕುರಿತಾದ ಕಪಟ ಭರವಸೆಗೆ ಪರ್ಯಾಯವೊಂದನ್ನು ಜನತೆಗೆ ಒದಗಿಸಲು ಕಠಿಣ ಪ್ರಯತ್ನ ನಡೆಸಬೇಕು ಎಂದರು. ಇದೀಗ ದೇಶದ ಜನತೆಗೆ ತಮ್ಮ ಸಮಸ್ಯೆಯನ್ನು ಅರಿತು ಪರಿಹರಿಸುವ, ಬಡತನ , ನಿರುದ್ಯೋಗ ಕಡಿಮೆಗೊಳಿಸಿ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸುವ ಸರಕಾರದ ಅಗತ್ಯವಿದೆ. ಮೋದಿ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಭಾರತದ ಜನತೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳತ್ತ ಕಾತರದಿಂದ ನೋಡುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ -ದಬ್ಬಾಳಿಕೆ ಮತ್ತು ಶ್ರೇಣಿ ವ್ಯವಸ್ಥೆಯ ನಡುವಿನ ಈ ಚಾರಿತ್ರಿಕ ಹೋರಾಟದಲ್ಲಿ ಗೆಲುವು ಪಡೆಯುವ ಅತೀ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದ ಅವರು, ಸಂವಿಧಾನವನ್ನು ತುಳಿಯುತ್ತಿರುವ ದ್ವೇಷಭಾವನೆಯ ವಿಭಜನಾತ್ಮಕ ಮತ್ತು ಹಿಂಸೆಯನ್ನು ಪ್ರತಿಪಾದಿಸುವ ಶಕ್ತಿಗಳು ಅಧಿಕಾರಕ್ಕೆ ಮರಳದಂತೆ ಶ್ರಮ ವಹಿಸುವಂತೆ ಪಕ್ಷದ ಸಂಸದರಿಗೆ ಕರೆ ನೀಡಿದರು.
ಭಾರತೀಯ ಕೃಷಿಕರು ಹಾಗೂ ಯುವಜನತೆಯಲ್ಲಿ ಆಶಾವಾದ ತುಂಬಿ, ಸಾಲದ ಹೊರೆಯ ಜೊತೆಗೆ ಅಗತ್ಯವಸ್ತುಗಳ ಬೆಲೆಏರಿಕೆಯಿಂದ ಆಘಾತಗೊಂಡಿರುವ ಜನಸಾಮಾನ್ಯರಲ್ಲಿ ನೆಮ್ಮದಿಯ ಭಾವನೆ ಬೆಳೆಸುವುದರ ಜೊತೆಗೆ ಮಹಿಳೆಯರ ಹಾಗೂ ದಲಿತರ ಸುರಕ್ಷತೆಯನ್ನು ಖಾತರಿಪಡಿಸಬೇಕಿದೆ ಎಂದರು.
ತನಗೆ ಅಧಿಕಾರ ಕೊಟ್ಟರೆ 70 ವರ್ಷದಿಂದ ನಿಧಾನಗತಿಯಲ್ಲಿ ಚಲಿಸುತ್ತಿರುವ ಪ್ರಯಾಣಿಕರ ರೈಲಿನಂತಾಗಿರುವ ಭಾರತದ ಅಭಿವೃದ್ಧಿಯನ್ನು ಕ್ಷಿಪ್ರಗತಿಯಲ್ಲಿ ಸಾಗುವ ಮ್ಯಾಜಿಕ್ ರೈಲನ್ನಾಗಿ ಪರಿವರ್ತಿಸುವುದಾಗಿ ನಾಲ್ಕು ವರ್ಷದ ಹಿಂದೆ ಮೋದಿ, ಆಶ್ವಾಸನೆ ನೀಡಿದ್ದರು. ಆದರೆ ದುರದೃಷ್ಟವಶಾತ್, ನಾಲ್ಕು ವರ್ಷದ ಮೋದಿ ಆಡಳಿತದ ಬಳಿಕ ಈ ರೈಲು ಅಸಮರ್ಥ, ಸರ್ವಾಧಿಕಾರಿ ಹಾಗೂ ಅಹಂಕಾರಿ ಚಾಲಕನ ಕಾರಣದಿಂದ ವಿಪತ್ತಿನತ್ತ ಚಲಿಸುತ್ತಿದ್ದರೂ ಚಾಲಕ (ಮೋದಿ) ಪ್ರಯಾಣಿಕರ ಸಮಸ್ಯೆಯತ್ತ ಗಮನವೇ ನೀಡದ ಪರಿಸ್ಥಿತಿ ನೆಲೆಸಿದೆ ಎಂದು ರಾಹುಲ್ ಟೀಕಿಸಿದರು. ದೇಶ ನಿರ್ಮಾಣ ಕಾರ್ಯದಲ್ಲಿ ಸಹಕಾರ ನೀಡಿದ್ದ ಕಾಂಗ್ರೆಸ್ ಸಂವಿಧಾನದ ಆಶಯದಂತೆ ದೇಶದಲ್ಲಿ ಹಲವು ಸಂಸ್ಥೆಗಳನ್ನು ನಿರ್ಮಿಸಿತ್ತು. ಆದರೆ ಆರೆಸ್ಸೆಸ್ ಮತ್ತು ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ದೇಶದ ಪ್ರತಿಯೊಂದು ಸಂಸ್ಥೆಗಳ ಮೇಲೂ ದಾಳಿಗಳಾಗುತ್ತಿವೆ. ಆಧುನಿಕ ಭಾರತದಲ್ಲಿ ಪ್ರಜಾಪ್ರಭುತ್ವದ ದೇಗುಲ ಎಂದು ಕರೆಸಿಕೊಳ್ಳುತ್ತಿದ್ದ ಈ ಸಂಸ್ಥೆಗಳನ್ನು ಆರೆಸ್ಸೆಸ್ ನಾಶಗೊಳಿಸಿದೆ ಎಂದು ರಾಹುಲ್ ಆರೋಪಿಸಿದರು.







