ಕೈ ಮಗ್ಗ ಉಳಿಸಿ ಚಳವಳಿಗೆ ಜನತೆ ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಲಿ: ಚಿರಂಜೀವಿ ಸಿಂಗ್

ಬೆಂಗಳೂರು, ಆ.7: ಕೈಮಗ್ಗ ಉದ್ಯಮವು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಇಂದು ಕ್ಷೀಣಿಸುವ ಹಂತಕ್ಕೆ ಮುಟ್ಟಿದೆ. ಹೀಗಾಗಿ ಕೈ ಮಗ್ಗ ಬಟ್ಟೆ ಉಳಿಸಿ ಅಭಿಯಾನದಲ್ಲಿ ಪ್ರತಿಯೊಬ್ಬರು ಸ್ವಯಂ ಪ್ರೇರಿತವಾಗಿ ಭಾಗವಹಿಸಬೇಕು ಎಂದು ಸಂಸ್ಕೃತಿ ಚಿಂತಕ ಚಿರಂಜೀವಿ ಸಿಂಗ್ ಆಶಿಸಿದ್ದಾರೆ.
ಉತ್ತರ ಕರ್ನಾಟಕದ ಕೈಮಗ್ಗ ನೇಕಾರರ ಹೋರಾಟವನ್ನು ಬೆಂಬಲಿಸಿ ನಗರದ ಎಂಜಿ ರಸ್ತೆ ಮತ್ತು ಬ್ರಿಗೇಡ್ ಜಂಕ್ಷನ್ ಬಳಿಯಲ್ಲಿ ಕೈ ಮಗ್ಗ ಬಟ್ಟೆಗಳನ್ನು ಮಾರಾಟ ಮಾಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೈ ಮಗ್ಗ ಚಳವಳಿ ಕೇವಲ ಒಂದು ಸಂಸ್ಥೆಯಲ್ಲ. ಹೀಗಾಗಿ ರಾಜ್ಯದ ಪ್ರತಿಯೊಬ್ಬರು ಈ ಚಳವಳಿಯಲ್ಲಿ ಭಾಗವಹಿಸುವ ಮೂಲಕ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಕೈ ಮಗ್ಗ ಎನ್ನುವುದು ಕೇವಲ ಒಂದು ವೃತ್ತಿಮಾತ್ರವಲ್ಲ. ಅದು ನಮ್ಮ ಸಂಸ್ಕೃತಿ ಹಾಗೂ ಅಸ್ಮಿತೆಯ ಪ್ರಶ್ನೆಯಾಗಿದೆ. ಇದನ್ನು ಉಳಿಸಿ, ಬೆಳೆಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ರಂಗಕರ್ಮಿ ಪ್ರಸನ್ನ ನೇತೃತ್ವದಲ್ಲಿ ನಡೆಯುತ್ತಿರುವ ಕೈ ಮಗ್ಗ ಉಳಿಸಿ ಚಳವಳಿಯಲ್ಲಿ ಭಾಗವಹಿಸುವುದು ನಮ್ಮ ಆದ್ಯ ಕರ್ತವ್ಯವೆಂದು ಅವರು ಹೇಳಿದರು.
ಹಿರಿಯ ರಂಗಕರ್ಮಿ ಹಾಗೂ ಹೋರಾಟಗಾರ ಪ್ರಸನ್ನ ಮಾತನಾಡಿ, ಕೈಮಗ್ಗ ಅಭಿವೃದ್ಧಿ ನಿಗಮವನ್ನು ನಡೆಸಲು ರಾಜ್ಯ ಸರಕಾರವು ಅಸಮರ್ಥವಾಗಿದೆ. ಹೀಗಾಗಿ ನಿಗಮವನ್ನು ನೇಕಾರರಿಗೇ ವಹಿಸಿಕೊಡಿ. ಅದನ್ನು ಬಲಗೊಳಿಸಿ, ಸಮುದಾಯಕ್ಕೆ ಬೆನ್ನೆಲುಬಾಗಿ ಮಾಡಲಿದ್ದಾರೆ ಎಂದು ತಿಳಿಸಿದರು.
ಕೈಮಗ್ಗ ನೇಕಾರಿಕೆ ಎನ್ನುವುದು ಸಾಂಪ್ರದಾಯಿಕ ಉದ್ಯಮವಾಗಿದ್ದು, ಪರಿಸರಸ್ನೇಹಿಯಾಗಿದೆ. ಈ ಉದ್ಯಮವನ್ನು ಪ್ರಾರಂಭಿಸಲು ಲಕ್ಷಾಂತರ ಕೋಟಿ ರೂ. ಬಂಡವಾಳದ ಅವಶ್ಯಕತೆ ಇದಕ್ಕಿಲ್ಲ, ಸಾವಿರಾರು ಕೋಟಿ ರೂ.ವೆಚ್ಚದಲ್ಲಿ ಉತ್ತರ ಕರ್ನಾಟಕದ ಲಕ್ಷಾಂತರ ನೇಕಾರರನ್ನು ಸ್ವಾವಲಂಬಿಗಳನ್ನಾಗಿ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.
ಕೈ ಮಗ್ಗ ಚಳವಳಿಯ ಭಾಗವಾಗಿ ಸಾರ್ವಜನಿಕ ಪ್ರದೇಶದಲ್ಲೆ ಕೈ ಮಗ್ಗ ಬಟ್ಟೆಗಳನ್ನು ಮಾರಾಟ ಮಾಡುವ ಅಭಿಯಾನವನ್ನು ಆರಂಭಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಅಭಿಯಾನದಲ್ಲಿ ಭಾಗವಹಿಸಿ, ಕೈ ಮಗ್ಗ ಬಟ್ಟೆಗಳನ್ನು ಕೊಂಡುಕೊಂಡು ಚಳವಳಿಯನ್ನು ಮತ್ತಷ್ಟು ವಿಸ್ತರಿಸಬೇಕೆಂದು ಅವರು ಆಶಿಸಿದರು. ಈ ಅಭಿಯಾನದಲ್ಲಿ ಕಲಾವಿದೆ ಚಂದ್ರ ಜೈನ್, ನಿತ್ಯಾನಂದ ಸ್ವಾಮಿ, ವಿಟ್ಟಪ್ಪಗೋರಂಟ್ಲಿ ಸೇರಿದಂತೆ ನೂರಾರು ಮಂದಿ ಯುವ ಜನತೆ ಭಾಗವಹಿಸಿದ್ದು ವಿಶೇಷವಾಗಿತ್ತು.







