‘ಸಮಗ್ರ ಹನಿ ನೀರಾವರಿ ಮೂಲಕ ಇಳುವರಿ ಹೆಚ್ಚಳಕ್ಕೆ ಚಿಂತನೆ’
ಬೆಂಗಳೂರು, ಆ.7: ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆಯ ಪ್ರಮುಖ ಯೋಜನೆಗಳಲ್ಲಿ ಹನಿ ನೀರಾವರಿ ಒದಗಿಸುವ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆ ನಡೆಸಲಾಯಿತು.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಈ ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ, ಸಿಂಗಟಾಲ್ನೂರ್, ಕೊಪ್ಪಳ, ಪೂರಿಗಾಲಿ, ಸಾವನೂರು ಮತ್ತು ನಂದವಡಗಿ ಏತ ನೀರಾವರಿ ಯೋಜನೆಗಳಡಿಯಲ್ಲಿ 4,87,158 ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಲಾಗಿದೆ. ಸಮಗ್ರ ಹನಿ ನೀರಾವರಿ ಯೋಜನೆ ಮೂಲಕ ಪ್ರತಿ ಎಕರೆಗೆ ಇಳುವರಿ ಹೆಚ್ಚು ಮಾಡುವ ಬಗ್ಗೆ ಪರಿಶೀಲಿಸಲಾಯಿತು.
ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ, ಸರಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ಸಿಂಗ್, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಮಹೇಂದ್ರಜೈನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.







