3 ತಿಂಗಳಲ್ಲಿ 8 ದಶಲಕ್ಷ ಪ್ರಯಾಣಿಕರ ಪ್ರಯಾಣ: ದಾಖಲೆ ನಿರ್ಮಿಸಿದ ಕೆಂಪೇಗೌಡ ವಿಮಾನ ನಿಲ್ದಾಣ

ಬೆಂಗಳೂರು, ಆ.7: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಳೆದ ಮೂರು ತಿಂಗಳಿನಲ್ಲಿ ಎಂಟು ದಶಲಕ್ಷ ಪ್ರಯಾಣಿಕರು ಪ್ರಯಾಣಿಸುವ ಮೂಲಕ ದಾಖಲೆಯನ್ನು ನಿರ್ಮಿಸಲಾಗಿದೆ.
2018-19 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 2 ದಶಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸಿದ್ದು, ವಾರ್ಷಿಕ ಶೇ.32.9ರಷ್ಟು ಪ್ರಗತಿ ಸಾಧಿಸಿದೆ. ಅಲ್ಲದೆ, ಏರ್ ಟ್ರಾಫಿಕ್ ಮೂಮೆಂಟ್(ಎಟಿಎಂ) ಮತ್ತು ಸರಕು ಕಾರ್ಯಾಚರಣೆಗಳೂ ಹೆಚ್ಚಾಗಿದೆ.
2017-18 ನೆ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಜೂ.30ರಂದು ಒಂದೇ ದಿನ 98,869 ಪ್ರಯಾಣಿಕರು ಹಾರಾಟ ನಡೆಸಿದ್ದು, ಇದೊಂದು ಹೊಸ ದಾಖಲೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
ವಿಮಾನ ನಿಲ್ದಾಣದಲ್ಲಿ ದೇಶಿ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ದೇಶೀಯ ಪ್ರಯಾಣಿಕರ ಸಂಖ್ಯೆ ಶೇ.35.8ರಷ್ಟು ಹೆಚ್ಚಾಗಿದ್ದರೆ, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಶೇ.16.8ರಷ್ಟು ಹೆಚ್ಚಾಗಿದೆ. ರಜೆಯ ಕಾಲವಾಗಿದ್ದರಿಂದ ಹಾಗೂ ಏರ್‌ಲೈನ್ಸ್‌ಗಳು ವಿಶೇಷ ಆಫರ್‌ಗಳನ್ನು ನೀಡುತ್ತಿರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ ಹಾಗೂ ಜೂನ್ ತಿಂಗಳಿನಲ್ಲಿ 6.94 ದಶಲಕ್ಷ ದೇಶಿ ಪ್ರಯಾಣಿಕರು ಹಾಗೂ 1.08 ದಶಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಕೆ ಮಾಡಿದ್ದಾರೆ. ಏರ್ ಟ್ರಾಫಿಕ್ ಮೂವ್‌ಮೆಂಟ್‌ನಲ್ಲಿ ಶೇ.32.9ರಷ್ಟು ಹೆಚ್ಚಳವಾಗಿದ್ದು, ಇದರ ಪರಿಣಾಮ ವಿಮಾನಗಳ ಕಾರ್ಯಾಚರಣೆ ಸಂಖ್ಯೆ 43,673 ರಿಂದ 58,054ಕ್ಕೆ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಕಾರ್ಗೋ ವಿಭಾಗದಲ್ಲಿ ಸಾಕಷ್ಟು ಬೆಳವಣಿಗೆಗಳು ಕಂಡು ಬಂದಿವೆ. 2017-18ನೆ ಸಾಲಿನಲ್ಲಿ 83,584 ಟನ್‌ಗಳಷ್ಟು ಸರಕು ಸಾಗಾಣಿಕೆಯಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ 97,486 ಟನ್‌ಗಳಷ್ಟು ಸರಕು ಸಾಗಾಣಿಕೆಯಾಗಿವೆ. ಈ ಮೂಲಕ ಶೇ.16.6ರಷ್ಟು ಬೆಳವಣಿಗೆ ಸಾಧಿಸಿದೆ.







