ಬಂಟ್ವಾಳ: ಆ.10ರಂದು ಎಸ್ಸೆಸ್ಸೆಫ್‌ನಿಂದ "ಆಝಾದಿ ರ್ಯಾಲಿ"

ಬಂಟ್ವಾಳ, ಆ. 7: ಸ್ವಾತಂತ್ರ್ಯೋತ್ಸವದ ಅಂಗವಾಗಿ ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಘಟಕದ ವತಿಯಿಂದ ಆ. 10ರಂದು ಮಧ್ಯಾಹ್ನ 3.30ಕ್ಕೆ "ಆಝಾದಿ ರ್ಯಾಲಿ"ಯನ್ನು ಹಮ್ಮಿಕೊಂಡಿದೆ ಎಂದು ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ ಹೇಳಿದ್ದಾರೆ.
ಮಂಗಳವಾರ ಸಂಜೆ ಬಿ.ಸಿ,ರೊಡ್‌ನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಮಧ್ಯಾಹ್ನ ಕೈಕಂಬದಿಂದ ರ್ಯಾಲಿ ಉದ್ಘಾಟನೆ ಗೊಂಡು ಬಿ.ಸಿ.ರೋಡ್ ಮಾರ್ಗವಾಗಿ ಸಾಗಿ ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂನಲ್ಲಿ ಸಮಾಪ್ತಿಗೊಳ್ಳಲಿದೆ. ಜಿಲ್ಲೆಯ 10 ಡಿವಿಷನ್ ಕೇಂದ್ರ ವಾಗಿಟ್ಟುಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ 500 ಘಟಕಗಳ ಸಾವಿರಾರು ಕಾರ್ಯಕರ್ತರು ಈ ರ್ಯಾಲಿಯಲ್ಲಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ದೇಶದಲ್ಲಿ ಸೌಹಾರ್ದತೆ, ಧರ್ಮಸಹಿಷ್ಣುತೆ, ಪರಸ್ಪರ ಪ್ರೀತಿ ಹಾಗೂ ಸಾಮರಸ್ಯ ಬೆಳೆಯಬೇಕೆಂಬ ಉದ್ದೇಶದಿಂದ ಈ ರ್ಯಾಲಿಯನ್ನು ಹಮ್ಮಿಕೊಳ್ಳಲಾ ಗಿದ್ದು, ಸಂಘಟನೆಯ ವಿಶೇಷ ತಂಡವಾದ ರೈಟ್ ಟೀಮ್ ಹಾಗೂ ಸಮವಸ್ತ್ರ ದಾರಿಗಳಾದ ಕಾರ್ಯಕರ್ತರ ರ್ಯಾಲಿಯು ಈ ವರ್ಷದ ವಿಶೇಷತೆಯಾಗಿದೆ. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಎಸ್ಸೆಸ್ಸೆಫ್ ರಾಜ್ಯ ನಾಯಕ ಶಾಫಿ ಸಅದಿ, ರಾಜ್ಯ ಕಾರ್ಯದರ್ಶಿ ಸುಫ್ಯಾನ್ ಹಾಗೂ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ನಾಯಕರು ಭಾಗವಹಿಸುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಸೆಸ್ಸೆಫ್ ಜಿಲ್ಲಾ ಸದಸ್ಯ ಅಬ್ದುಲ್ ರಶೀದ್ ವಗ್ಗ, ಅಕ್ಬರ್ ಮದನಿ, ಇರ್ಷಾದ್ ಗೂಡಿನಬಳಿ, ಸಲೀಂ ಹಾಜಿ ಬೈರಿಕಟ್ಟೆ ಉಪಸ್ಥಿತರಿದ್ದರು.







