ಆಶ್ರಯ ಯೋಜನೆಯ ನಿವೇಶನ ಹಂಚಿಕೆ ಪಟ್ಟಿ ವಿಚಾರ: ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ಮಧ್ಯಂತರ ಆದೇಶ

ಬೆಂಗಳೂರು, ಆ.7: ಬೆಂಗಳೂರು ದಕ್ಷಿಣ ತಾಲೂಕಿನ ಚನ್ನೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯ 1,615 ನಿವೇಶನ ಹಂಚಿಕೆ ಪಟ್ಟಿ ಕುರಿತಂತೆ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ಮಂಗಳವಾರ ಮಧ್ಯಂತರ ಆದೇಶ ನೀಡಿದೆ.
ಹೊನ್ನಗಾನಹಟ್ಟಿ ಗ್ರಾಮದ ಸರೋಜಮ್ಮ ಸೇರಿ 150 ಜನ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ನ್ಯಾಯಪೀಠ, ಅರ್ಜಿ ಕುರಿತು ನ್ಯಾಯಾಲಯ ಹೊರಡಿಸುವ ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸರಕಾರಕ್ಕೆ ನಿರ್ದೇಶಿಸಿತು. ಜೊತೆಗೆ, ರಾಜ್ಯ ಸರಕಾರ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ, ಬೆಂಗಳೂರು ನಗರ ಜಿಲ್ಲಾಧಿಕಾರಿ ಸೇರಿ ಎಲ್ಲ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಪರ ವಕೀಲ ಕೆ.ಆರ್.ಲಿಂಗರಾಜು ವಾದ ಮಂಡಿಸಿ, 2008ರಲ್ಲೇ ಅರ್ಜಿದಾರರಿಗೆ ಆಶ್ರಯ ನಿವೇಶನ ಮಂಜೂರು ಮಾಡಲಾಗಿತ್ತು. ಆದರೆ ಅದನ್ನು ರದ್ದುಪಡಿಸಲಾಗಿದೆ. ಹೀಗಾಗಿ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆ ಜಾರಿಗೊಳಿಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.
ಸರಕಾರದ ನಿಯಮಗಳ ಪ್ರಕಾರ, ಆಶ್ರಯ ನಿವೇಶನ ಹಂಚಿಕೆಗೆ ಲಾನುಭವಿಗಳು ಅದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಆದರೆಇಲ್ಲಿ ತುಮಕೂರು, ಬೆಂಗಳೂರು ಸೇರಿ ಬೇರೆಡೆ ನೆಲೆಸಿರುವವರಿಗೂ ನಿವೇಶನ ಹಂಚಿಕೆಗೆ ಶಿಫಾರಸು ಮಾಡಲಾಗಿದೆ. ಇದು ಕಾನೂನು ಬಾಹಿರ ಕ್ರಮ. 2008ರಲ್ಲಿ ಲಾನುಭವಿಗಳಾಗಿದ್ದವರಿಗೆ ಈ ಸಲ ಆಯ್ಕೆಯಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಆದೇಶವಿದ್ದರೂ ಅದನ್ನು ಪಾಲಿಸಲಾಗಿಲ್ಲ ಎಂದು ದೂರಿದರು.
ಆಶ್ರಯ ನಿವೇಶನಗಳಿಗಾಗಿ ಅರ್ಜಿದಾರರು 2003ರಿಂದಲೂ ಆಕಾಂಕ್ಷಿಗಳಾಗಿದ್ದಾರೆ. ಕೂಲಿ ಕೆಲಸವನ್ನು ಮಾಡುತ್ತಾ ಬದುಕುತ್ತಿರುವ ಅವರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಅವರಿಗೆ ಸೂರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲು ಸರಕಾರಕ್ಕೆ ಸೂಚಿಸಬೇಕು. ಅರ್ಜಿ ಇತ್ಯರ್ಥವಾಗುವರೆಗೆ 2017ರ ಮೇ 27ರಂದು ಶಿಫಾರಸು ಮಾಡಿರುವ ಆಶ್ರಯ ಸಮಿತಿಯ ಲಾನುಭವಿಗಳ ಪಟ್ಟಿಯನ್ನು ತಡೆ ಹಿಡಿಯುವಂತೆ ಗ್ರಾಮ ಪಂಚಾಯತ್ ಗೆ ನಿರ್ದೇಶಿಸಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.







