ರಾಜ್ಯ ಸರಕಾರಕ್ಕೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ
ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ ಅಧಿನಿಯಮಗಳು ಪ್ರಶ್ನಿಸಿ ಅರ್ಜಿ ಸಲ್ಲಿಕೆ

ಬೆಂಗಳೂರು, ಆ.7: ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ(ಶಾಲಾ ಶುಲ್ಕ ನಿಯಂತ್ರಣ ಮತ್ತು ಡೊನೇಷನ್) ಅಧಿನಿಯಮಗಳು (ತಿದ್ದುಪಡಿ) 2016ರನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ತಕರಾರು ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿದೆ.
ಕರ್ನಾಟಕ ವಿದ್ಯಾರ್ಥಿಗಳ ಪೋಷಕರ ಜಾಗೃತಿ ವೇದಿಕೆ ಸೇರಿ ಇತರ ನಾಲ್ವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಪೀಠ, ಪ್ರತಿವಾದಿಗಳಾದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಅಧೀನ ಕಾರ್ಯದರ್ಶಿಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಆಕ್ಷೇಪಣೆ ಏನು: ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ ಅಧಿನಿಯಮಗಳಿಗೆ ಸರಕಾರ ತಂದಿರುವ ತಿದ್ದುಪಡಿಯಲ್ಲಿ ಭೌಗೋಳಿಕ ಪ್ರದೇಶವಾರು ಶಾಲೆಗಳ ಶುಲ್ಕದಲ್ಲಿ ಹೆಚ್ಚುವರಿ ಶುಲ್ಕವನ್ನು ಏರಿಕೆ ಮಾಡಲಾಗಿದೆ. ಇದರ ಪ್ರಕಾರ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಹಾಗೂ ಪುರಸಭೆ ವ್ಯಾಪ್ತಿಯ ಶಾಲೆಗಳಲ್ಲಿ ಹೆಚ್ಚುವರಿ ಶುಲ್ಕವನ್ನು ಶೇ. 70, ನಗರಸಭೆ ವ್ಯಾಪ್ತಿಯ ಶಾಲೆಗಳಲ್ಲಿ ಶೇ. 80, ಬಿಬಿಎಂಪಿ ಹೊರತು ಪಡಿಸಿ ಉಳಿದ ಮಹಾನಗರ ಪಾಲಿಕೆಗಳಲ್ಲಿ ಶೇ. 90 ಹಾಗೂ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಶೇ. 100 ಹೆಚ್ಚುವರಿ ಶುಲ್ಕ ನಿಗದಿಪಡಿಸಲಾಗಿದೆ. ಇದು ವಿದ್ಯಾರ್ಥಿಗಳ ಪಾಲಕರಿಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸಲಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ನಿಯಮಗಳ ಪ್ರಕಾರ ಯಾವುದೇ ಶಾಲೆಗಳು ಪ್ರತಿ ವರ್ಷ ಗರಿಷ್ಠ ಶೇ.15ಕ್ಕಿಂತ ಪ್ರವೇಶ ಶುಲ್ಕ ಹೆಚ್ಚಳ ಮಾಡುವಂತಿಲ್ಲ. ಇದು ಶಾಲಾ ಸಿಬ್ಬಂದಿ ವೇತನ ಮತ್ತು ಶಾಲಾ ಖರ್ಚು ವೆಚ್ಚಗಳನ್ನು ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯಿಂದ ಭಾಗಿಸಿ ನಿಗದಿಪಡಿಸಬೇಕು. ಆದರೆ, ಸರಕಾರ ತಂದಿರುವ ತಿದ್ದುಪಡಿಯಿಂದ ಖಾಸಗಿ ಶಾಲೆಗಳಿಗೆ ಸಂಪೂರ್ಣ ಲಾಭದಾಯಕವಾಗಿದೆ. ಸರಕಾರದ ಈ ನಿರ್ಧಾರದ ಹಿಂದೆ ಖಾಸಗಿ ಶಾಲೆಗಳಿಂದ ದೊಡ್ಡ ಲಾಬಿ ನಡೆದಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.







