ಮೋದಿ ಸರಕಾರದಿಂದ ಬಡವರ ಹಣ ಬಲವಂತದ ವಸೂಲು: ಕೆಪಿಸಿಸಿ ಕಾರ್ಯದರ್ಶಿ ಬಸವರಾಜ್

ದಾವಣಗೆರೆ, ಆ.7: ಇಂದಿರಾಗಾಂಧಿ ಆಡಳಿತ ಕಾಲದಲ್ಲಿ ಬ್ಯಾಂಕ್ ರಾಷ್ಟ್ರೀಕರಣ ಮಾಡುವ ಮೂಲಕ ಕೇವಲ ಶ್ರೀಮಂತರು ಮತ್ತು ಉಳ್ಳವರಿಗೆ ಸೀಮಿತವಾಗಿದ್ದ ಬ್ಯಾಂಕ್‌ಗಳು ರೈತರು, ಬಡವರು ಮತ್ತು ಶ್ರೀಸಾಮಾನ್ಯರಿಗೆ ತನ್ನ ಬಾಗಿಲನ್ನು ತೆರೆದು ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಿದ್ದರು. ಆದರೆ, ಈಗಿನ ಪ್ರಧಾನಿ ಮೋದಿ ಆಡಳಿತದಲ್ಲಿ ಬ್ಯಾಂಕ್‌ಗಳ ಮೂಲಕ ಬಡಜನರು ಕನಿಷ್ಠ ಮೊತ್ತ ಕಾಯ್ದುಕೊಂಡಿಲ್ಲವೆಂಬ ಕಾರಣಕ್ಕೆ 2017-18ರ ಸಾಲಿಗೆ 5 ಸಾವಿರ ಕೋಟಿ ರೂ. ದಂಡದ ರೂಪದಲ್ಲಿ ಒತ್ತಾಯ ಪೂರ್ವಕವಾಗಿ ವಸೂಲಿ ಮಾಡಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ಇಂದಿರಾ ಕಾಲದಲ್ಲಿ ಬಡಜನರಿಗೆ ಆರ್ಥಿಕ ಶಕ್ತಿ ತುಂಬಲು ಸಾಲಮೇಳಗಳನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿತ್ತು. ಆದರೆ, ಮೋದಿ ಆಡಳಿತದಲ್ಲಿ ನೋಟು ಅಮಾನ್ಯೀಕರಣ, ಕನಿಷ್ಠ ಮೊತ್ತ ಕಾಯ್ದುಕೊಂಡಿಲ್ಲ ಎಂಬಿತ್ಯಾದಿ ಅವೈಜ್ಞಾನಿಕ ಕಾಯ್ದೆಗಳನ್ನು ಬ್ಯಾಂಕ್‌ಗಳ ಮೇಲೆ ಹೇರುವ ಮೂಲಕ ಬಡಜನರ ಜೇಬಿಗೆ ಕತ್ತರಿ ಹಾಕಲಾಗಿದೆ ಎಂದರು.
ಮೋದಿ ಸ್ನೇಹಿತ ಉದ್ದಿಮೆದಾರರು ಸಾವಿರಾರು ಕೋಟಿ ಬ್ಯಾಂಕ್‌ಗಳಿಂದ ಸಾಲ ಪಡೆದು ದೇಶ ತೊರೆದಿದ್ದು, ಸಾಲ ತಿರುವಳಿ ಆಗದ ಕಾರಣ ಬ್ಯಾಂಕ್‌ಗಳು ದಿವಾಳಿ ಹಂತ ತಲುಪಿವೆ. ಹಾಗಾಗಿ, ಬ್ಯಾಂಕ್‌ಗಳ ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಬಡಜನರ ಖಾತೆಗಳಲ್ಲಿ ಕನಿಷ್ಠ ಮಾಸಿಕ ಮೊತ್ತ ಕಾಪಾಡುವ, ಮಾಸಿಕಕ್ಕೆ ಕೇವಲ ಮೂರು ಬಾರಿ ವ್ಯವಹಾರ ನಡೆಸಬೇಕು ಎಂಬುದು ಸೇರಿದಂತೆ ಅನೇಕ ಅವೈಜ್ಞಾನಿಕ ಕಾನೂನು ತಂದೊಡ್ಡುವ ಮೂಲಕ ನೇರ ಬಡಜನರ ಖಾತೆಯಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಮೋದಿ ಆಡಳಿತದಲ್ಲಿ ಭಾರತದ ಅರ್ಥವ್ಯವಸ್ಥೆ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ. ಬರಲಿರುವ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಡಜನತೆ ಮೋದಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಡಿ. ಬಸವರಾಜ್ ತಿಳಿಸಿದ್ದಾರೆ.







