‘ದ್ರಾವಿಡ ಸೂರ್ಯ’ ಅಸ್ತಂಗತ ಕರುಣಾನಿಧಿ ರಾಜಕೀಯ ಯಾತ್ರೆಯ ಹಿನ್ನೋಟ

ಚೆನ್ನೈ, ಆ.7: ‘ಕಲೈಞರ್’ ಎಂದೇ ಬೆಂಬಲಿಗರಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಕರುಣಾನಿಧಿ ಅವರ ರಾಜಕೀಯ ಯಾತ್ರೆಯ ಒಂದು ಸಂಕ್ಷಿಪ್ತ ನೋಟ:
ಜನನ: 1924ರ ಜೂನ್ 3; ತಮಿಳುನಾಡಿನ ಅಂದಿನ ತಂಜಾವೂರು(ಇಂದು ತಿರುವರೂರ್) ಜಿಲ್ಲೆಯ ತಿರುಕ್ಕವಲೈ. ಮೊದಲ ಹೆಸರು ದಕ್ಷಿಣಾಮೂರ್ತಿ.
1938: ಜಸ್ಟಿಸ್ ಪಾರ್ಟಿಗೆ ಸೇರುವ ಮೂಲಕ ರಾಜಕೀಯ ಪ್ರವೇಶ. ಹಿಂದಿ ವಿರೋಧಿ ಚಳವಳಿಯಲ್ಲಿ ಪಾಲ್ಗೊಂಡಿದ್ದರು.
1942: ಕೈಬರಹದ, ಎಂಟು ಪುಟಗಳನ್ನು ಒಳಗೊಂಡಿದ್ದ ‘ಮನಾವರ್ ನೇಸನ್’ ಎಂಬ ಪತ್ರಿಕೆಯನ್ನು ಆರಂಭಿಸಿದರು. ಬಳಿಕ ಇದು ಡಿಎಂಕೆಯ ಮುಖವಾಣಿ ‘ಮುರಸೋಳಿ’ ಎಂಬ ಹೆಸರು ಪಡೆಯಿತು. ಬಳಿಕ ತಮಿಳುನಾಡು ತಮಿಳ್ ಮನ್ನವರ್ ಮಂದ್ರಮ್ ಎಂಬ ಸಂಘಟನೆ ಆರಂಭಿಸಿದ್ದು ಇದು ಬಳಿಕ ಡಿಎಂಕೆಯ ವಿದ್ಯಾರ್ಥಿ ಸಂಘಟನೆಯಾಗಿ ಬೆಳೆಯಿತು.
1944: ಜ್ಯುಪಿಟರ್ ಪಿಕ್ಚರ್ಸ್ ಸಂಸ್ಥೆಗೆ ಚಿತ್ರಕಥೆ ಲೇಖಕನಾಗಿ ಸೇರಿದರು.
1947: ಇವರು ಚಿತ್ರಕಥೆ ಬರೆದ ಪ್ರಥಮ ಸಿನೆಮ ‘ರಾಜಕುಮಾರಿ’ ಬಿಡುಗಡೆ.
1949: ದ್ರಾವಿಡರ್ ಕಳಗಂನಿಂದ ದೂರವಾಗಿದ್ದ ಅಣ್ಣಾದುರೈ ಜೊತೆ ಸೇರಿ ಡಿಎಂಕೆ ಸ್ಥಾಪನೆ.
1952: ಕರುಣಾನಿಧಿ ಚಿತ್ರಕಥೆ ಬರೆದಿದ್ದ ಯಶಸ್ವೀ ಸೂಪರ್‌ಹಿಟ್ ಸಿನೆಮ ‘ಪರಾಶಕ್ತಿ’ ಬಿಡುಗಡೆ. ದ್ರಾವಿಡರ ಚಳವಳಿಯ ತಿರುಳನ್ನು ಹೊಂದಿದ್ದ ಪ್ರಥಮ ಚಿತ್ರವಿದು.
1953: ಕಲ್ಲಕುಡಿ ನಗರವನ್ನು ದಾಲ್ಮಿಯಾಪುರಂ(ಸಿಮೆಂಟ್ ಸಂಸ್ಥೆಯೊಂದರ ಹೆಸರು) ಎಂದು ಮರುನಾಮಕರಣಗೊಳಿಸುವ ನಿರ್ಧಾರವನ್ನು ವಿರೋಧಿಸಿ ರೈಲು ಹಳಿಗಳ ಮೇಲೆ ಮಲಗಿ ಪ್ರತಿಭಟನೆ. 3 ತಿಂಗಳ ಸೆರೆವಾಸದ ಶಿಕ್ಷೆ.
1957: ಕುಳಿತಲೈ ವಿಧಾನಸಭಾ ಕ್ಷೇತ್ರದಿಂದ ಮೊತ್ತ ಮೊದಲ ಬಾರಿಗೆ ಚುನಾಯಿತರಾದರು.
1961: ಡಿಎಂಕೆಯ ಖಜಾಂಚಿಯಾಗಿ ನೇಮಕ.
1962: ವಿಧಾನಸಭೆಯಲ್ಲಿ ವಿರೋಧಪಕ್ಷಗಳ ಉಪನಾಯಕನಾಗಿ ನೇಮಕ.
1967: ಡಿಎಂಕೆ ಮೊತ್ತಮೊದಲ ಬಾರಿಗೆ ಅಧಿಕಾರಕ್ಕೆ. ಅಣ್ಣಾದುರೈ ಸಂಪುಟದಲ್ಲಿ ಕರುಣಾನಿಧಿ ಲೋಕೋಪಯೋಗಿ ಇಲಾಖೆಯ ಸಚಿವರಾಗಿ ನೇಮಕ.
1969: ಅಣ್ಣಾದುರೈ ನಿಧನದ ಬಳಿಕ ಮೊತ್ತಮೊದಲ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾದರು.
1972: ಕರುಣಾನಿಧಿಯಿಂದ ದೂರವಾದ ಎಂಜಿಆರ್ ಎಐಎಡಿಎಂಕೆ ಸ್ಥಾಪಿಸಿದರು.
1976: ಭ್ರಷ್ಟಾಚಾರದ ಆರೋಪದಲ್ಲಿ ಕರುಣಾನಿಧಿ ಸರಕಾರವನ್ನು ಇಂದಿರಾಗಾಂಧಿ ವಜಾಗೊಳಿಸಿದರು.
1977: ಎಐಎಡಿಎಂಕೆ ಅಧಿಕಾರಕ್ಕೆ ಬಂದಿತು. ಮುಂದಿನ 13 ವರ್ಷ ಕರುಣಾನಿಧಿ ವಿಪಕ್ಷದ ಸ್ಥಾನದಲ್ಲಿ ಕುಳಿತರು.
1989: ಎಂಜಿಆರ್ ನಿಧನದ ಬಳಿಕ ಡಿಎಂಕೆ ಹಾಗೂ ಕರುಣಾನಿಧಿ ಮರಳಿ ಅಧಿಕಾರಕ್ಕೆ.
1991, ಜನವರಿ: ಎಲ್‌ಟಿಟಿಇಗೆ ನಿಕಟವಾಗಿದೆ ಎಂಬ ಕಾರಣ ನೀಡಿ ಕೇಂದ್ರ ಸರಕಾರ ಡಿಎಂಕೆ ಸರಕಾರವನ್ನು ವಜಾಗೊಳಿಸಿತು.
1991, ಮೇ: ರಾಜೀವ್‌ಗಾಂಧಿಯವರ ಹತ್ಯೆ; ಎಐಎಡಿಎಂಕೆ-ಕಾಂಗ್ರೆಸ್ ಮಿತ್ರಕೂಟ ಚುನಾವಣೆಯಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆಯಿತು.
1996: ರಜನೀಕಾಂತ್ ಡಿಎಂಕೆ-ಟಿಎಂಸಿ ಮೈತ್ರಿಕೂಟವನ್ನು ಬೆಂಬಲಿಸಿದ ಬಳಿಕ ಜಯಲಲಿತಾರನ್ನು ಅಧಿಕಾರದಿಂದ ಕೆಳಗಿಳಿಸಿ ಮರಳಿ ಅಧಿಕಾರಕ್ಕೆ.
2001: ಭ್ರಷ್ಟಾಚಾರ ಆರೋಪದಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರಕಾರ ಕರುಣಾನಿಧಿ, ಸ್ಟಾಲಿನ್ ಹಾಗೂ ಮಾರನ್‌ರನ್ನು ಬಂಧಿಸಿತು.
2004: ಲೋಕಸಭಾ ಚುನಾವಣೆಯಲ್ಲಿ 40 ಸ್ಥಾನ ಪಡೆದಿದ್ದ ಡಿಎಂಕೆ ನೇತೃತ್ವದ ಮಿತ್ರಕೂಟ ಕೇಂದ್ರ ಸರಕಾರದಲ್ಲಿ 7 ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು.
2006: ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ.
2009: ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾದರು. ಬಳಿಕ ಗಾಲಿಕುರ್ಚಿಯ ಸಹಾಯ ಪಡೆಯಬೇಕಾಯಿತು.
2010: 2ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಕೇಂದ್ರದ ಟೆಲಿಕಾಂ ಸಚಿವ ಎ.ರಾಜ ಹೆಸರು ಕೇಳಿಬಂದಿತು.
2011: 2ಜಿ ಹಗರಣದಲ್ಲಿ ಕರುಣಾನಿಧಿ ಪುತ್ರಿ ಕನಿಮೋಳಿ ಬಂಧನ. ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆಗೆ ಸೋಲು.
2013, ಜನವರಿ: ತನ್ನ ಉತ್ತರಾಧಿಕಾರಿಯಾಗಿ ಸ್ಟಾಲಿನ್ ಹೆಸರು ಘೋಷಣೆ .
2013, ಮಾರ್ಚ್: ಈಳಂ ತಮಿಳು ವಿವಾದ ; ಯುಪಿಎಯಿಂದ ಹಿಂದೆ ಸರಿದ ಡಿಎಂಕೆ, ಕೇಂದ್ರ ಸಂಪುಟಕ್ಕೆ ಡಿಎಂಕೆ ಸಚಿವರ ರಾಜೀನಾಮೆ.
2014: ಪಕ್ಷದಿಂದ ಹಿರಿಯ ಪುತ್ರ ಅಳಗಿರಿ ಉಚ್ಛಾಟನೆ; ವಯಸ್ಸನ್ನು ಮರೆತು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರೂ ಡಿಎಂಕೆಗೆ ಸೋಲು. ಆದರೆ ತಿರುವರೂರ್ ಸ್ಥಾನ ಉಳಿಸಿಕೊಂಡ ಕರುಣಾನಿಧಿ.
2016: ಆಸ್ಪತ್ರೆಗೆ ದಾಖಲು; ಕೆಲ ದಿನದ ಬಳಿಕ ಬಿಡುಗಡೆ.
2017, ಜನವರಿ: ಬಿಗಡಾಯಿಸಿದ ಆರೋಗ್ಯಸ್ಥಿತಿ. ಡಿಎಂಕೆ ಕಾರ್ಯಾಧ್ಯಕ್ಷರಾಗಿ ಸ್ಟಾಲಿನ್ ಆಯ್ಕೆ. 2017, ಮೇ: ವಿಧಾನಸಭಾ ಶಾಸಕನಾಗಿ 60 ವರ್ಷ ಪೂರ್ಣ.
2017, ಅಕ್ಟೋಬರ್: ಪಕ್ಷದ ಮುಖವಾಣಿ ‘ಮುರಸೋಳಿ’ಯ 75ನೇ ವರ್ಷಾಚರಣೆಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಪತ್ರಿಕೆಯ ಕಚೇರಿಗೆ ಆಗಮನ. ಒಂದು ವರ್ಷದ ಬಳಿಕ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡರು.
2018 ಜೂನ್: 94ನೇ ಜನ್ಮದಿನಾಚರಣೆ.







