ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಲು ಆಗ್ರಹಿಸಿ ಪ್ರತಿಭಟನೆ
ಬೆಂಗಳೂರು, ಆ.7: ಉದ್ಯೊಗದಲ್ಲಿ ಸೇವಾ ಭದ್ರತೆ ಕಲ್ಪಿಸಬೇಕೆಂದು ಒತ್ತಾಯಿಸಿ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೂರಾರು ಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ಸರಕಾರಿ ಗುತ್ತಿಗೆ ನೌಕರರ ಮಹಾ ಒಕ್ಕೂಟದ ನೇತೃತ್ವದಲ್ಲಿ ಜಮಾಯಿಸಿದ ನೌಕರರು, ರಾಜ್ಯ ಸರಕಾರ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡದಂತೆ ಈ ಕೂಡಲೇ ಆದೇಶ ಹೊರಡಿಸಬೇಕೆಂದು ಪಟ್ಟು ಹಿಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಪ್ರಧಾನ ಸಂಚಾಲಕ ಡಾ.ಎಚ್.ವಿ ವಾಸು, ಚುನಾವಣಾ ಪೂರ್ವದಲ್ಲಿ ಗುತ್ತಿಗೆ ನೌಕರರಿಗೆ ಭದ್ರತೆ ಕಲ್ಪಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಆದರೆ, ಹೊಸ ಸರಕಾರ ಬಂದ ಬಳಿಕ ಹಲವು ಇಲಾಖೆಗಳಲ್ಲಿ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಇಂಧನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಲ್ಲಿ ಗುತ್ತಿಗೆ ನೌಕರರಿಗೆ 5 ರಿಂದ 9 ತಿಂಗಳುಗಳಿಂದ ವೇತನ ನೀಡಿದೇ ದುಡಿಸಿಕೊಳ್ಳುತ್ತಿದ್ದಾರೆ. 15 ರಿಂದ 20 ವರ್ಷಗಳ ಕಾಲ ದುಡಿದವರನ್ನೂ ಕೆಲಸದಿಂದ ನಿರ್ದಾಕ್ಷಿಣ್ಯವಾಗಿ ತೆಗೆದುಹಾಕುತ್ತಿರುವುದು ನೋವಿನ ಸಂಗತಿ. ಈ ಹಿನ್ನೆಲೆಯಲ್ಲಿ ಗುತ್ತಿಗೆ ಮತ್ತು ತಾತ್ಕಾಲಿಕ ನೌಕರರನ್ನು ಕೆಲಸದಿಂದ ತೆಗೆಯದಂತೆ ಆದೇಶಿಸುವಂತೆ ಆಗ್ರಹಿದರು.
ವೇತನ ನೀಡದಿರುವುದು, ಕಾನೂನು ಮತ್ತು ಗುತ್ತಿಗೆ ಕಾರ್ಮಿಕ ಕಾಯ್ದೆಯ ಉಲ್ಲಂಘನೆಯಾಗಿದೆ. ಚುನಾವಣೆಗೆ ಮುಂಚೆ ಗುತ್ತಿಗೆ ನೌಕರರಿಗೆ 60 ವರ್ಷಗಳ ವರೆಗೆ ಸೇವಾ ಭದ್ರತೆ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ. ಹಲವು ಗುತ್ತಿಗೆ ಕಾರ್ಮಿಕರು ಈ ನಡೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದು ನೋವಿನ ವಿಚಾರ. ನಮ್ಮ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
‘ಗುತ್ತಿಗೆ ನೌಕರರ ವೇತನ ಭದ್ರತೆ, ಸೇವಾ ಭದ್ರತೆಗೆ ಸಂಬಂಧಿಸಿದಂತೆ ಕಾನೂನಿನ ಪ್ರಕಾರವೇ ಕೆಲ ಸೂಕ್ತ ಕ್ರಮ ತೆಗೆದುಕೊಳ್ಳಲು ಸಾಧ್ಯವಿದೆ. ಸೇವಾ ಭದ್ರತೆಗೆ ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳಬೇಕು’
-ಡಾ.ಎಚ್.ವಿ ವಾಸು, ಒಕ್ಕೂಟದ ಪ್ರಧಾನ ಸಂಚಾಲಕ







