ಕೂಲಿಕಾರರ ಹಾಜರಾತಿ, ಸಂಪೂರ್ಣ ವಿವರ ನೀಡಲು ಹೈಕೋರ್ಟ್ ಆದೇಶ
ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡಿದವರಿಗೆ ವೇತನ ನೀಡದ ವಿಚಾರ

ಬೆಂಗಳೂರು, ಆ.7: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ನರೇಗಾ) ಅಡಿಯಲ್ಲಿ ಕೂಲಿ ಕೆಲಸ ಮಾಡಿದರೂ ಮೂರು ವರ್ಷಗಳಿಂದ ವೇತನ ಸಿಕ್ಕಿಲ್ಲ ಎಂದು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೂಲಿಕಾರರ ಹಾಜರಾತಿಯ ದಾಖಲಾತಿ ಹಾಗೂ ಸಂಪೂರ್ಣ ವಿವರ ನೀಡಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ತುಮಕೂರು ಜಿಲ್ಲೆಯ ತಾಳಗುಂಡ ಗ್ರಾಮದ ಕದರನ್ನ ಸೇರಿ 60 ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿತು. ಅರ್ಜಿದಾರರ ಪರ ವಾದಿಸಿದ ವಕೀಲ ಎಸ್.ರಾಜು ಅವರು, ಶಿರಾ ತಾಲೂಕಿನ ತಾಳಗುಂಡ ಗ್ರಾಮದ ಜನರು ಮೂರು ವರ್ಷಗಳ ಹಿಂದೆಯೇ ನರೇಗಾ ಯೋಜನೆಯಡಿಯಲ್ಲಿ ಕೂಲಿ ಕೆಲಸ ಮಾಡಿದ್ದಾರೆ. ಆದರೆ, ತಾಳಗುಂಡ ಗ್ರಾಮ ಪಂಚಾಯತ್ ನವರು ಇಲ್ಲಿಯವರೆಗೆ ವೇತನವನ್ನು ನೀಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ವಾದಿಸಿ, ನರೇಗಾ ಯೋಜನೆ ಅಡಿಯಲ್ಲಿ ಗ್ರಾಮದ ಜನರು ಯಾವುದೆ ಕೂಲಿ ಕೆಲಸವನ್ನು ಮಾಡಿಲ್ಲ. ಹೀಗಾಗಿ, ವೇತನವನ್ನು ನೀಡಲಾಗಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ನರೇಗಾ ಯೋಜನೆಯಡಿಯಲ್ಲಿ ಗ್ರಾಮದ ಜನರು ಕೂಲಿ ಮಾಡಿದರೂ ಯಾಕೆ ಮೂರು ವರ್ಷಗಳಿಂದ ವೇತನವನ್ನು ನೀಡಿಲ್ಲ. ನೀವು ಕೂಲಿಕಾರರಿಗೆ ಹಣ ನೀಡದಿದ್ದರೆ ನಿಮ್ಮ ಸ್ವಂತ ಹಣವನ್ನೇ ಆ ಕೂಲಿಕಾರರಿಗೆ ಕೊಡಿಸಬೇಕಾಗುತ್ತದೆ ಎಂದು ಎಚ್ಚರಿಸಿದ ನ್ಯಾಯಪೀಠವು, ಈ ದೇಶಕ್ಕೆ ಸ್ವಾತಂತ್ರ ಬರುವ ಮೊದಲು ಬ್ರಿಟಿಷರು ಜನರ ರಕ್ತವನ್ನು ಹೀರುತ್ತಿದ್ದರು. ಆದರೆ, ಈಗ ನೀವು(ಅಧಿಕಾರಿಗಳು) ಕೂಲಿಕಾರರ ರಕ್ತವನ್ನು ಹೀರುತ್ತಿದ್ದಿರಿ ಎಂದು ಕಿಡಿಕಾರಿದರು.
ಈಗ ನೋಡಿದರೆ ತನಿಖೆಗಾಗಿ ಕಮಿಟಿಯನ್ನು ರಚಿಸುತ್ತೇವೆ ಎಂದು ಹೇಳುತ್ತಿದ್ದಿರಿ. ಆದರೆ, ಎರಡು ವರ್ಷಗಳ ಕೆಳಗೆ ಈ ಕೆಲಸವನ್ನು ನಿಮ್ಮಿಂದ ಯಾಕೆ ಮಾಡಲು ಸಾಧ್ಯವಾಗಲಿಲ್ಲ ಎಂದು ನ್ಯಾಯಮೂರ್ತಿಗಳು ಸರಕಾರಿ ಪರ ವಕೀಲರನ್ನು ಪ್ರಶ್ನಿಸಿ, ಮುಂದಿನ ವಿಚಾರಣೆ ವೇಳೆಗೆ ಕೂಲಿಕಾರರ ಹಾಜರಾತಿಯ ದಾಖಲಾತಿ ಹಾಗೂ ಸಂಪೂರ್ಣ ವಿವರ ನೀಡಲು ರಾಜ್ಯ ಸರಕಾರಕ್ಕೆ ಆದೇಶಿಸಿತು.







