ಶಿವಮೊಗ್ಗ ಮ್ಯಾನ್‌ಹೋಲ್ ದುರಂತ: ಮೃತರ ಕುಟುಂಬಗಳಿಗೆ ತಲಾ 14.12 ಲಕ್ಷ ರೂ. ಪರಿಹಾರ ವಿತರಣೆ

ಶಿವಮೊಗ್ಗ, ಆ. 7: ಶಿವಮೊಗ್ಗ ನಗರದ ಎನ್.ಟಿ.ರಸ್ತೆಯ ಬಳಿ ಸೋಮವಾರ ಮ್ಯಾನ್‌ಹೋಲ್ ಸ್ವಚ್ಚಗೊಳಿಸುವ ವೇಳೆ ಉಸಿರುಗಟ್ಟಿ ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಗಳಿಗೆ ತಲಾ 14.12 ಲಕ್ಷ ರೂ. ಪರಿಹಾರ ನೀಡಲಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತದಿಂದ ತಲಾ 10 ಲಕ್ಷ ರೂ. ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ತಲಾ 4.12 ಲಕ್ಷ ರೂ. ಪರಿಹಾರ ಮೊತ್ತದ ಚೆಕ್‌ಗಳನ್ನು ಮೃತರ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಅಧಿಕಾರಿಗಳು, ಪ್ರತ್ಯೇಕವಾಗಿ ಮಂಗಳವಾರ ಹಸ್ತಾಂತರಿಸಿದ್ದಾರೆ.
ಬಾಕಿ ಮೊತ್ತ: ನಿಯಮಾನುಸಾರ ಪೊಲೀಸ್ ಇಲಾಖೆಯು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ ನಂತರ ಬಾಕಿ ತಲಾ 4.12 ಲಕ್ಷ ರೂ.ಯನ್ನು ಮೃತ ಇಬ್ಬರು ಕಾರ್ಮಿಕರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ಸ್ಥಳೀಯ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪರಿಹಾರ ಮೊತ್ತ ವಿತರಿಸಿದ ನಂತರವಷ್ಟೆ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದರು. ಅಧಿಕಾರಿಗಳು ಪರಿಹಾರ ಮೊತ್ತ ವಿತರಿಸಿದ ನಂತರ ಶವಗಳನ್ನು ಸಂಬಂಧಿಗಳಿಗೆ ಹಸ್ತಾಂತರಿಸಲಾಯಿತು. ಶವಾಗಾರದ ಬಳಿ ಮೃತರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸ್ ದಾಖಲು
ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ವೇಳೆ ಇಬ್ಬರು ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾನುವೆಲ್ ಸ್ಕ್ಯಾವೆಜಿಂಗ್ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಶಿವಮೊಗ್ಗ ಉಪ ವಿಭಾಗದ ಸದಸ್ಯ ಕಾರ್ಯದರ್ಶಿ ಹಾಗೂ ಸಹಾಯಕ ನಿರ್ದೇಶಕರಾದ ಡಿ. ಮಲ್ಲೇಶಪ್ಪಅವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಕೆಯುಎಸ್‌ಎಸ್‌ಬಿ ಕಚೇರಿಯ ಯುಜಿಡಿ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಗುತ್ತಿಗೆದಾರರು, ಉಸ್ತುವಾರಿ ಇಂಜಿನಿಯರ್ ಹಾಗೂ ಮೇಸ್ತ್ರಿಯ ವಿರುದ್ದ ಐಪಿಸಿ ಕಲಂ 304, ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡ ಕಾಯ್ದೆ, ಮ್ಯಾನುವೆಲ್ ಸ್ಕ್ಯಾವೆಜಿಂಗ್ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯಿಂದ ಎಚ್ಚರಿಕೆ
ಮ್ಯಾನ್‌ಹೋಲ್ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ನಿಯಮಾನುಸಾರ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದೆ. ಸರಕಾರದ ವತಿಯಿಂದ ಲಭ್ಯವಾಗುವ ಎಲ್ಲ ನೆರವನ್ನು ಕಾಲಮಿತಿಯಲ್ಲಿ ಕಲ್ಪಿಸಿ ಕೊಡಲಾಗುವುದು. ಮುಂದಿನ ದಿನಗಳಲ್ಲಿ ಈ ರೀತಿಯ ಅವಘಡಗಳಿಗೆ ಆಸ್ಪದವಾಗದಂತೆ ಎಚ್ಚರವಹಿಸಲು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕರ್ತವ್ಯ ಲೋಪ ಎಸಗುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ. ಎ. ದಯಾನಂದ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.







