ತುಮಕೂರು: ಕನಿಷ್ಟ ಕೂಲಿ, ತುಟ್ಟಿಭತ್ಯೆ ಜಾರಿಗೆ ಒತ್ತಾಯಿಸಿ ಬೀಡಿ ಕಾರ್ಮಿಕರಿಂದ ಧರಣಿ

ತುಮಕೂರು.ಆ.07: ರಾಜ್ಯ ಸರಕಾರ ನಿಗದಿಗೊಳಿಸಿರುವ ಕನಿಷ್ಠ ವೇತನ, ಸಾವಿರ ಬೀಡಿಗೆ 210 ರೂಪಾಯಿ ಹಾಗೂ ಬೆಲೆ ಏರಿಕೆ ಸೂಚ್ಯಂಕವನ್ನು ಆಧರಿಸಿ ತುಟ್ಟಿಭತ್ಯೆ ಅಂಕವೊಂದಕ್ಕೆ 4 ಪೈಸೆಯಂತೆ 10 ರೂ. 52 ಪೈಸೆಯನ್ನು ಒಳಗೊಂಡು ಒಂದು ಸಾವಿರ ಬೀಡಿಗೆ 1 ಏಪ್ರಿಲ್ 2018 ರಿಂದ 1000 ಬೀಡಿಗೆ 220 ರೂ. 52 ಪೈಸೆ ನೀಡುವಂತೆ ಒತ್ತಾಯಿಸಿ ಬೀಡಿ ಕಾರ್ಮಿಕರು ಕಾರ್ಮಿಕ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಿದರು.
ನಗರದ ಗುಂಚಿ ಚೌಕದ ಪಕ್ಕದಲ್ಲಿರುವ ಕಾರ್ಮಿಕ ಇಲಾಖೆಯ ಬಳಿ ಪ್ರತಿಭಟನೆ ನಡೆಸಿದ ಬೀಡಿ ಕಾರ್ಮಿಕರು, ನಿಯಮದಂತೆ ಕನಿಷ್ಠ ಕೂಲಿ ನೀಡಬೇಕು. ಇದುವರೆಗೂ ಇರುವ ಬಾಕಿ ವೇತನವನ್ನು ಪಾವತಿಸಬೇಕು ಎಂದು ಕಾರ್ಮಿಕ ಅಧಿಕಾರಿಗಳಿಗೆ ಆಗ್ರಹಿಸಿದರು.
ಬೀಡಿ ಕಾರ್ಮಿಕ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಮಾತನಾಡಿ, ಜಿಲ್ಲೆಯಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸಿ, ಎರಡನೇ ಸ್ಥಾನದಲ್ಲಿರುವ ಬೀಡಿ ಉದ್ಯಮದಲ್ಲಿನ ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳನ್ವಯ ಲಾಗ್ ಪುಸ್ತಕ ಗುರುತಿನ ಚೀಟಿ, ಭವಿಷ್ಯನಿಧಿಗೆ ಒಳಪಡಿಸುವ ಮತ್ತು ಬೋನಸ್ ನೀಡಲು ಅಗತ್ಯವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಮನ್ವಯದಿಂದ ಕೆಲಸ ಮಾಡಿ ಸರ್ವೇ ಕಾರ್ಯ ನಡೆಸುವಂತೆ ಆಗ್ರಹಿಸಿದರು.
ಬೀಡಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಷಹತಾಜ್, ಉಪಾಧ್ಯಕ್ಷ ಶಿರಾ ನಿಸಾರ್ ಅಹಮದ್ ಮಾತನಾಡಿ ಕನಿಷ್ಠ ಕೂಲಿಯನ್ನು ಜಾರಿಗೊಳಿಸಲು ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಕುಣಿಗಲ್ ತಾಲೂಕಿನ ಕಾರ್ಯದರ್ಶಿ ಅಬ್ದುಲ್ ಮುನಾಫ್, ಡಿವೈಎಫ್‍ಐ ನಗರಾಧ್ಯಕ್ಷ ಜಿ.ದರ್ಶನ್ ಮಾತನಾಡಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಚಂದ್ರಶೇಖರ ಆರಾಧ್ಯ ಮಾತನಾಡಿ, ಅಧಿಸೂಚಿತ ಕನಿಷ್ಟ ಕೂಲಿ ಜಾರಿಗೊಳಿಸಲು ಕಾರ್ಮಿಕ ಇಲಾಖೆ ಬದ್ದವಾಗಿದೆ. ಕನಿಷ್ಟ ಕೂಲಿ ನೀಡದೇ ಇರುವ ಆಡಳಿತ ಮಂಡಳಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು. ಕಾರ್ಮಿಕ ಅಧಿಕಾರಿಗಳ ಮೂಲಕ ಕಾರ್ಮಿಕ ಸಚಿವರು, ಮುಖ್ಯಮಂತ್ರಿ ಹಾಗೂ ಇಲಾಖಾ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.







